ನವದೆಹಲಿ: ಉಕ್ರೇನ್ನ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ಪಣತೊಟ್ಟಿದ್ದು, ಅದಕ್ಕೋಸ್ಕರ 'ಆಪರೇಷನ್ ಗಂಗಾ' ಯೋಜನೆ ಹಮ್ಮಿಕೊಂಡಿದೆ. ಈಗಾಗಲೇ 9 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿರುವ ಕೇಂದ್ರ ಸರ್ಕಾರ ಉಳಿದವರನ್ನು ಕರೆತರಲು ಮುಂದಿನ ಮೂರು ದಿನಗಳಲ್ಲಿ 26 ವಿಮಾನಗಳನ್ನು ಉಕ್ರೇನ್ಗೆ ರವಾನಿಸಲಿದೆ.
ಆದರೆ, ಕಳೆದ ಎರಡು ದಿನಗಳಿಂದ ಉಕ್ರೇನ್ನ ಖಾರ್ಕಿವ್ ಸೇರಿದಂತೆ ವಿವಿಧ ನಗರಗಳ ಮೇಲೆ ರಷ್ಯಾ ಮಿಲಿಟರಿ ದಾಳಿ ಹೆಚ್ಚು ತೀವ್ರತೆ ಪಡೆದುಕೊಂಡಿದ್ದು, ಅಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವುದು ಭಾರತಕ್ಕೆ ಸವಾಲಿನ ಕೆಲಸವಾಗಿದೆ. ಹೀಗಾಗಿ, ಇಂದು ರಾತ್ರಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: 'ಉಕ್ರೇನ್ನಲ್ಲಿ ಈವರೆಗೆ 2,000 ನಾಗರಿಕರು, ರಷ್ಯಾದ 6,000 ಯೋಧರ ಸಾವು'
ಈ ಮಾತುಕತೆಯ ವೇಳೆ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯದಲ್ಲಿ ಸಹಾಯ ಮಾಡುವಂತೆ ಕೇಳಿಕೊಳ್ಳುವ ಸಾಧ್ಯತೆ ಇದೆ. ಪುಟಿನ್ ಜೊತೆಗಿನ ಮಾತುಕತೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೇಂದ್ರದ ವಿವಿಧ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗಿರುವುದಾಗಿ ವರದಿಯಾಗಿದೆ.
ಆದಷ್ಟು ಬೇಗ ಉಕ್ರೇನ್ ತೊರೆಯಲು ಸೂಚನೆ: ಖಾರ್ಕಿವ್ ಮೇಲೆ ರಷ್ಯಾ ತೀವ್ರ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದಂತೆ ಕೇಂದ್ರ ಸರ್ಕಾರ ಅಲ್ಲಿನ ಭಾರತೀಯ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ ನೀಡಿದ್ದು, ಸಂಜೆ 6 ಗಂಟೆಯೊಳಗೆ ಯಾವುದೇ ಪರಿಸ್ಥಿತಿಯಲ್ಲಿಯೂ ಖಾರ್ಕಿವ್ ತೊರೆಯುವಂತೆ ತಿಳಿಸಿದೆ.