ನವದೆಹಲಿ: ಜಿ20 ಶೃಂಗಸಭೆ ಮತ್ತು COP26 ನಲ್ಲಿ ಭಾಗವಹಿಸಿ ಭಾರತಕ್ಕೆ ವಾಪಸ್ಸಾದ ತಕ್ಷಣ, ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 3 ರಂದು ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಡಿಮೆ ಕೋವಿಡ್ ಲಸಿಕಾಕರಣ ದಾಖಲಿಸಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಪ್ರಧಾನ ಮಂತ್ರಿಗಳ ಕಚೇರಿಯ ಅಧಿಕೃತ ಹೇಳಿಕೆಯ ಪ್ರಕಾರ, ಸಭೆಯು ಮೊದಲ ಡೋಸ್ ನೀಡಿಕೆಯಲ್ಲಿ ಶೇ. 50 ಕ್ಕಿಂತ ಕಡಿಮೆ ಸಾಧನೆ ಹೊಂದಿದ ಜಿಲ್ಲೆಗಳು ಮತ್ತು ಎರಡನೇ ಡೋಸ್ ಕಡಿಮೆ ನೀಡಿರುವ ಜಿಲ್ಲೆಗಳನ್ನು ಒಳಗೊಂಡಿರುತ್ತದೆ.
ಜಾರ್ಖಂಡ್, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಕಡಿಮೆ ಲಸಿಕೆ ವ್ಯಾಪ್ತಿಯ ಜಿಲ್ಲೆಗಳನ್ನು ಹೊಂದಿರುವ ಇತರ ರಾಜ್ಯಗಳ 40 ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನ ಮಂತ್ರಿ ಸಂವಾದ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಈ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಉಪಸ್ಥಿತರಿರುತ್ತಾರೆ ಎಂದು ಕಚೇರಿ ಹೇಳಿದೆ.