ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಮುಂದಿನ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ(ಆಗಸ್ಟ್ 9) ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಲಿದ್ದಾರೆ.
ಈ ಮೂಲಕ 19,500 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು 9.75 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ ವರ್ಗಾಯಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರೈತ ಫಲಾನುಭವಿಗಳೊಂದಿಗೆ ಸಂವಾದ ನಡೆಸುತ್ತಾರೆ ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
ಪಿಎಂ-ಕಿಸಾನ್ ಯೋಜನೆಯಡಿ, ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ ವರ್ಷಕ್ಕೆ 6 ಸಾವಿರ ರೂಪಾಯಿ ಆರ್ಥಿಕ ಸಹಾಯ ನೀಡಲಾಗುತ್ತದೆ. ನಾಲ್ಕು ತಿಂಗಳಿಗೆ ಒಂದು ಬಾರಿ ಮೂರು ಕಂತುಗಳಲ್ಲಿ 2 ಸಾವಿರ ರೂಪಾಯಿಯನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಈವರೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ 1.38 ಲಕ್ಷ ಕೋಟಿ ರೂಪಾಯಿಯನ್ನು ರೈತ ಕುಟುಂಬಗಳಿಗೆ ವರ್ಗಾಯಿಸಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಕಂತು ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಭಾಗವಹಿಸಲಿದ್ದಾರೆ.
ಇದಕ್ಕೂ ಮುನ್ನ ಮೇ 14ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯ 8ನೇ ಕಂತನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: 'ಬೆಳ್ಳಿ ಹುಡುಗಿ' ಬರ್ತ್ಡೇ.. ಮೀರಾಬಾಯಿ ಚಾನುಗೆ ಹುಟ್ಟುಹಬ್ಬದ ಸಂಭ್ರಮ