ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ - ಕಿಸಾನ್) ಯೋಜನೆಯಡಿ 10 ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 12:30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಡುಗಡೆ ಮಾಡಲಿದ್ದಾರೆ.
ಪ್ರಧಾನ ಮಂತ್ರಿ ಕಾರ್ಯಾಲಯದ (PMO) ಅಧಿಕೃತ ಹೇಳಿಕೆಯ ಪ್ರಕಾರ, ಇದು ಸರ್ಕಾರದ ನಿರಂತರ ಬದ್ಧತೆ ಮತ್ತು ತಳಮಟ್ಟದ ರೈತರನ್ನು ಸಬಲೀಕರಣಗೊಳಿಸುವ ಸಂಕಲ್ಪಕ್ಕೆ ಅನುಗುಣವಾಗಿದೆ. 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ನೀಡಲಾಗುತ್ತದೆ. ರೈತ ಕುಟುಂಬಗಳಿಗೆ ಇದುವರೆಗೆ 1.6 ಲಕ್ಷ ಕೋಟಿ ರೂ.ಪಾಯಿಗೂ ಹೆಚ್ಚು ಗೌರವ ಧನ ನೀಡಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಪಿಎಂ-ಕಿಸಾನ್ ಯೋಜನೆಯಡಿ ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ(ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ) ವರ್ಷಕ್ಕೆ 6,000 ರೂ. ಸಹಾಯ ಧನವನ್ನು ನೀಡಲಾಗುತ್ತದೆ. ತಲಾ 2,000 ರೂ.ಗಳನ್ನು ನಾಲ್ಕು-ಮಾಸಿಕ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಇನ್ನು ಕರ್ನಾಟಕ ಸರ್ಕಾರ ಇದಕ್ಕೆ 4 ಸಾವಿರ ರೂ. ಹೆಚ್ಚುವರಿಯಾಗಿ ನೀಡುತ್ತಾ ಬಂದಿದೆ.
ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಿ ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) 14 ಕೋಟಿ ರೂ.ಗಿಂತ ಹೆಚ್ಚಿನ ಇಕ್ವಿಟಿ ಅನುದಾನವನ್ನು ಬಿಡುಗಡೆ ಮಾಡಲಿದ್ದಾರೆ. ಇದರಿಂದ 1.24 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ಎಫ್‌ಪಿಒ ಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಜತೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಾಥ್ ನೀಡಲಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದಂದೇ ದುರಂತ: ವೈಷ್ಣೋದೇವಿ ಭವನದಲ್ಲಿ ಕಾಲ್ತುಳಿತಕ್ಕೆ ಕನಿಷ್ಠ 12 ಮಂದಿ ಸಾವು, 20 ಮಂದಿಗೆ ಗಾಯ