ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ಬಿಕ್ಕಟ್ಟಿನ ನಂತರ ಪ್ರಧಾನಿ ನರೇಂದ್ರ ಮೋದಿ ಪ್ರಥಮ ವಿದೇಶ ಪ್ರವಾಸ ಕೈಗೊಳ್ಳಲಿದ್ದು, ಮಾರ್ಚ್ 26 ಮತ್ತು 27ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ.
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಆಹ್ವಾನದ ಮೇರೆಗೆ ಮೋದಿ ನೆರೆಯ ದೇಶಕ್ಕೆ ಭೇಟಿ ನೀಡಲಿರುವ ಬಗ್ಗೆ ವಿದೇಶಾಂಗ ಸಚಿವಾಲಯ (ಎಂಇಎ) ಪ್ರಕಟಣೆ ಹೊರಡಿಸಿದೆ.
ಪ್ರಧಾನಿಯ ಈ ಪ್ರವಾಸವು ಮೂರು ಸ್ಮರಣೀಯ ಘಟನೆಗಳಿಗೆ ಸಂಬಂಧಿಸಿದೆ. ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ರಾಜತಾಂತ್ರಿಕ ಸಂಬಂಧ ಏರ್ಪಟ್ಟು 50 ವರ್ಷ ಪೂರೈಸಿದ್ದು ಮತ್ತು ಬಾಂಗ್ಲಾ ವಿಮೋಚನಾ ಯುದ್ಧ ನಡೆದು 50 ವರ್ಷಗಳು ಕಳೆದಿದ್ದು.
ತಮ್ಮ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾರ್ಚ್ 26ರಂದು ಬಾಂಗ್ಲಾದೇಶದ ರಾಷ್ಟ್ರೀಯ ದಿನದ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಧಾನಿ ಅವರು ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಮೊದಲ ವಿದೇಶ ಪ್ರವಾಸವನ್ನು ಬಾಂಗ್ಲಾದೇಶಕ್ಕೆ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಇದು ಬಾಂಗ್ಲಾದೇಶಕ್ಕೆ ಭಾರತವು ನೀಡುವ ಆದ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಎಂಇಎ ಪ್ರಕಟಣೆಯಲ್ಲಿ ತಿಳಿಸಿದೆ.
ಮೋದಿಯವರ ಕಾರ್ಯಕ್ರಮವು ಹಸೀನಾ ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ಹೊರತಾಗಿ, ಬಾಂಗ್ಲಾದೇಶದ ಅಧ್ಯಕ್ಷ ಎಂಡಿ ಅಬ್ದುಲ್ ಹಮೀದ್ ಅವರ ಭೇಟಿಯನ್ನು ಸಹ ಒಳಗೊಂಡಿದೆ. ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಅವರು ಮೋದಿಯವರನ್ನು ಭೇಟಿ ಮಾಡಲಿದ್ದಾರೆ.
ಇದನ್ನೂ ಓದಿ: ಚುನಾವಣಾ ಆಯುಕ್ತರ ನೇಮಕಾತಿ: ಸುಧಾರಣೆಗೆ ಇದು ಸೂಕ್ತ ಸಮಯ
ಕಳೆದ ವರ್ಷ ಡಿಸೆಂಬರ್ 17ರಂದು ಇಬ್ಬರು ಪ್ರಧಾನಿಗಳು ವರ್ಚುವಲ್ ಶೃಂಗಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ದೆಹಲಿಯ 'ನೆರೆಹೊರೆಯವರು ಪ್ರಥಮ' ನೀತಿಯ ಪ್ರಮುಖ ಆಧಾರಸ್ತಂಭವೆಂದರೆ ಬಾಂಗ್ಲಾದೇಶ ಎಂದು ಮೋದಿ ಪ್ರಸ್ತಾಪಿಸಿದ್ದರು. ಹಸೀನಾ ಅವರು ಕೂಡ ಭಾರತವನ್ನು 'ನಿಜವಾದ ಸ್ನೇಹಿತ' ಎಂದು ಬಣ್ಣಿಸಿದ್ದರು.