ನವದೆಹಲಿ: ಇಂದು ಬೆಳಗ್ಗೆ 11 ಗಂಟೆಗೆ ಕೋವಿಡ್ ನಿರ್ವಹಣೆ ಕುರಿತು ಅರಿಯಲು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಹಾಗೂ ಜಿಲ್ಲೆಗಳ ಅಧಿಕಾರಿಗಳ ಜೊತೆ ವರ್ಚುವಲ್ ಸಂವಾದ ನಡೆಸಲಿದ್ದಾರೆ.
ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಪ್ರಕಟಣೆ ಪ್ರಕಾರ, ಕರ್ನಾಟಕ, ಬಿಹಾರ, ಅಸ್ಸೋಂ, ಚಂಡೀಗಢ, ತಮಿಳುನಾಡು, ಉತ್ತರಾಖಂಡ, ಮಧ್ಯಪ್ರದೇಶ, ಗೋವಾ, ಹಿಮಾಚಲ ಪ್ರದೇಶ ಮತ್ತು ದೆಹಲಿ ರಾಜ್ಯಗಳಲ್ಲಿನ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿಗಳು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಕೆಲ ರಾಜ್ಯಗಳ ಮುಖ್ಯಮಂತ್ರಿಗಳೂ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Covid World Update: ಜಗದಗಲ 16.42 ಕೋಟಿ ಕೇಸ್, 34 ಲಕ್ಷ ಜನರು ಸಾವು
ಸಭೆಯಲ್ಲಿ ಅಧಿಕಾರಿಗಳು ಕೊರೊನಾ ಸಾಂಕ್ರಾಮಿಕ ನಿಭಾಯಿಸುವಲ್ಲಿ ತಮ್ಮ ಅನುಭವ ತಿಳಿಸಲಿದ್ದು, ವೈರಸ್ ವಿರುದ್ಧ ವಿಶೇಷವಾಗಿ ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೋರಾಟ ಮುಂದುವರೆಸಲು ತಮ್ಮ ಸಲಹೆಗಳನ್ನು ನೀಡಲಿದ್ದಾರೆ.
ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದು, ಹಳ್ಳಿ ಹಳ್ಳಿಗೂ ಕಾಲಿಟ್ಟಿದೆ. ಹೀಗಾಗಿ ಪ್ರಧಾನಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಇಂದು ಸಂವಾದ ನಡೆಸಲು ಮುಂದಾಗಿದ್ದಾರೆ.
ಕರ್ನಾಟಕದ 17 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಿದ್ದು, ಸದ್ಯದ ಸ್ಥಿತಿಗತಿ, ಈ ಸಂಬಂಧ ತೆಗೆದುಕೊಂಡಿರುವ ಕ್ರಮ, ಲಸಿಕಾ ಕಾರ್ಯಕ್ರಮ, ಆಕ್ಸಿಜನ್, ರೆಮ್ಡೆಸಿವಿರ್ ಔಷಧ ಲಭ್ಯತೆ ಬಗ್ಗೆ ಡಿಸಿಗಳ ಜೊತೆ ಪಿಎಂ ವಿಚಾರ ವಿನಿಮಯ ಮಾಡಲಿದ್ದಾರೆ. ಕೊರೊನಾ ನಿಯಂತ್ರಣದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.