ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ತೆರಳುವ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಜುಲೈ 13 ರಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ. ಪ್ರಧಾನ ಮಂತ್ರಿಯವರ ಸಂವಹನವು ಕ್ರೀಡಾಪಟುಗಳನ್ನು ಆಟಗಳಲ್ಲಿ ಭಾಗವಹಿಸುವ ಮುನ್ನ ಪ್ರೇರೇಪಿಸುವ ಪ್ರಯತ್ನವಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಇತ್ತೀಚೆಗೆ, ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ನಲ್ಲಿ ಕುರಿತು ಕೆಲವು ಕ್ರೀಡಾಪಟುಗಳ ಸ್ಪೂರ್ತಿದಾಯಕ ಪ್ರಯಾಣದ ಬಗ್ಗೆ ಚರ್ಚಿಸಿದ್ದರು. ಜೊತೆಗೆ ರಾಷ್ಟ್ರವು ಮುಂದೆ ಬರಲು ಮತ್ತು ಅವರನ್ನು ಪೂರ್ಣ ಹೃದಯದಿಂದ ಬೆಂಬಲಿಸುವಂತೆ ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾಗವಹಿಸಲಿದ್ದಾರೆ. ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಮತ್ತು ಕಾನೂನು ಸಚಿವ ಕಿರೆನ್ ರಿಜಿಜು ಇರಲಿದ್ದಾರೆ.
ಭಾರತದಿಂದ 18 ಕ್ರೀಡಾ ವಿಭಾಗಗಳಲ್ಲಿ ಒಟ್ಟು 126 ಕ್ರೀಡಾಪಟುಗಳು ಟೋಕಿಯೊಗೆ ತೆರಳಲಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಫೆನ್ಸರ್ (ಭವಾನಿ ದೇವಿ) ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ನೇತ್ರಾ ಕುಮಾನನ್ ಅವರು ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಮಹಿಳಾ ನಾವಿಕರಾಗಿದ್ದಾರೆ. ಸಜನ್ ಪ್ರಕಾಶ್ ಮತ್ತು ಶ್ರೀಹರಿ ನಟರಾಜ್ ಅವರು ಈಜು ಸ್ಪರ್ಧೆಯಲ್ಲಿ 'ಎ' ಅರ್ಹತಾ ಮಾನದಂಡ ಸಾಧಿಸುವ ಮೂಲಕ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಈಜುಗಾರರಾಗಿದ್ದಾರೆ.
ಇದನ್ನೂ ಓದಿ: 'ಅದ್ಭುತ! ವೆಲ್ಡನ್ ಹರ್ಲೀನ್ ಡಿಯೋಲ್': ಯುವ ಆಟಗಾರ್ತಿ ಪ್ರತಿಭೆಗೆ ಪ್ರಧಾನಿ ಮೋದಿ ಮೆಚ್ಚುಗೆ
ಜುಲೈ 17 ರಂದು ಭಾರತೀಯ ತಂಡವು ಟೋಕಿಯೊಗೆ ತೆರಳಲಿದೆ. ಒಲಿಂಪಿಕ್ಸ್ ಕ್ರೀಡಾಕೂಟ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ.