ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಹೊಸದಾಗಿ ನೇಮಕವಾಗಿರುವ 71,000 ಮಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರ ನೀಡುವರು ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಇದೇ ವೇಳೆ ಹೊಸದಾಗಿ ನೇಮಕವಾಗುತ್ತಿರುವ ಅಭ್ಯರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರ ನೀಡಲಿದ್ದಾರೆ. ರೋಜ್‌ಗಾರ್ ಮೇಳದ ಮೂಲಕ ಮತ್ತಷ್ಟು ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಇದು ಯುವ ಸಬಲೀಕರಣ ಮತ್ತು ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸಲು ಅವಕಾಶಗಳನ್ನು ನೀಡುತ್ತಿದೆ ಎಂದು ಪಿಎಂಒ ಹೇಳಿದೆ.
ಕೇಂದ್ರದ ವಿವಿಧ ಹುದ್ದೆಗಳಿಗೆ ನೇಮಕಾತಿ: ದೇಶಾದ್ಯಂತ ಭಾರತದ ಸರ್ಕಾರದ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಜ್ಯೂನಿಯರ್ ಇಂಜಿನಿಯರ್, ಲೋಕೋ ಪೈಲಟ್, ಟೆಕ್ನಿಷಿಯನ್, ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್, ಕಾನ್ಸ್ಟೇಬಲ್, ಸ್ಟನೋಗ್ರಾಫರ್, ಜ್ಯೂನಿಯರ್ ಅಕೌಂಟೆಂಟ್, ಗ್ರಾಮೀಣ ಡಕ್ ಸೇವಕ್, ಆದಾಯ ತೆರಿಗೆ ಇನ್ಸ್ಪೆಕ್ಟರ್, ಶಿಕ್ಷಕರು, ನರ್ಸ್, ವೈದ್ಯರು, ಸಾಮಾಜಿಕ ಭದ್ರತಾ ಅಧಿಕಾರಿ, ಪಿಎ, ಎಂಟಿಎಸ್ ಸೇರಿದಂತೆ ಹಲವು ಹುದ್ದೆಗಳಿವೆ.
ರೋಜ್‌ಗಾರ್ ಕಾರ್ಯಕ್ರಮದಲ್ಲಿ ಕರ್ಮಯೋಗಿ ಪ್ರಾರಂಭ್ ಮಾಡ್ಯೂಲ್‌ನಿಂದ ಹೊಸದಾಗಿ ಸೇರ್ಪಡೆಗೊಂಡ ಅಧಿಕಾರಿಗಳು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಕರ್ಮಯೋಗಿ ಪ್ರಾರಂಭ್ ಮಾಡ್ಯೂಲ್ ಎಂಬುದು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಎಲ್ಲಾ ಹೊಸ ನೇಮಕಾತಿಗಳಿಗಾಗಿ ಆನ್ಲೈನ್ ಮೂಲಕ ನಡೆಯುವ ಓರಿಯಂಟೇಶನ್ ಕೋರ್ಸ್ ಆಗಿದೆ.
ರೋಜ್‌ಗಾರ್ ಮೇಳದಲ್ಲಿ ಕೇಂದ್ರ ಸಚಿವರು ಭಾಗಿ: ರೋಜ್‌ಗಾರ್ ಮೇಳದಡಿಯಲ್ಲಿ ಯುವಕರಿಗೆ ಉದ್ಯೋಗಗಳನ್ನು ಒದಗಿಸಲು ವಿವಿಧ ಕೇಂದ್ರ ಸಚಿವರು ಜನವರಿಯಲ್ಲಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯೆಲ್, ಹರ್ದೀಪ್ ಪುರಿ, ಅನುರಾಗ್ ಠಾಕೂರ್ ಸೇರಿದಂತೆ ಒಟ್ಟು 45 ಸಚಿವರು ಮೇಳದಲ್ಲಿ ಭಾಗಿಯಾಗಲಿದ್ದಾರೆ.
ಭೋಪಾಲ್ನಲ್ಲಿ ಕೆಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಭಾಗಿಯಾದರೆ, ಮುಂಬೈನಲ್ಲಿ ಅನುಪ್ರಿಯ ಪಟೇಲ್, ನಾಗ್ಪುರ್ನಲ್ಲಿ ಅಶ್ವಿನ್ ಚೌಬೆ, ಪುಣೆಯಲ್ಲಿ ನಿತ್ಯಾನಂದ ರೈ, ನವದೆಹಲಿಯಲ್ಲಿ ಪಿಯೂಷ್ ಗೋಉಎಲ್, ಭುವನೇಶ್ವರದಲ್ಲಿ ಧರ್ಮೇಂದ್ರ ಪ್ರಧಾನ, ಲೂಧಿಯಾದಲ್ಲಿ ಹರ್ದಿಪ್ ಸಿಂಗ್ ಪುರಿ, ಲಕ್ನೋದಲ್ಲಿ ಗಜೇಂದ್ರ ಸಿಂಗ್ ಶೇಖವತ್, ಉದಯಪುರದಲ್ಲಿ ಅರ್ಜುನ್ ರಾಮ್ ಮೆಗಾವಲ್, ಕಾನ್ಪುರ್ನಲ್ಲಿ ಅನುರಾಗ್ ಸಿಂಗ್ ಠಾಕೂರ್, ಗಾಜಿಯಾಬಾದ್ನಲ್ಲಿ ಆರ್ಕೆ ಸಿಂಗ್, ಪಾಟ್ನಾದಲ್ಲಿ ಗಿರಿರಾಜ್ ಸಿಂಗ್, ಫರಿದಾಬಾದ್ನಲ್ಲಿ ಭೂಪೇಂದ್ರ ಯಾದವ್, ಜಮ್ಮುನಲ್ಲಿ ಅಜಯ್ ಭಟ್, ರಾಂಚಿಯಲ್ಲಿ ಪಶುಪತಿನಾಥ್ ಪರಸ್, ಬೆಂಗಳೂರಿನಲ್ಲಿ ಪ್ರಲ್ಹಾದ್ ಜೋಷಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಏನಿದು ರೋಜ್‌ಗಾರ್ ಮೇಳ?: ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಮಾಡುವ ನಿಟ್ಟಿನಲ್ಲಿ ಯಾವುದೇ ಕೆಲಸ ಮಾಡಿಲ್ಲ. ಮೋದಿ ಸರ್ಕಾರ ಬಂದ ಬಳಿಕ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ವಿಪಕ್ಷಗಳು ಈಗಾಗಲೇ ಸಾಕಷ್ಟು ಟೀಕೆಗಳನ್ನು ಮಾಡಿವೆ. ಈ ಹಿನ್ನೆಲೆಯಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರೋಜ್‌ಗಾರ್ ಮೇಳ ಪ್ರಾರಂಭಿಸಿದೆ. ಕಳೆದ ವರ್ಷ ಕೇಂದ್ರ ಈ ಮೇಳಕ್ಕೆ ಚಾಲನೆ ನೀಡಿತ್ತು.
ಇಂದು ನೇಮಕಾತಿ ಪತ್ರ ವಿತರಿಸಿ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ, ಇದೇ ವೇಳೆ ಜಾಗತಿಕ ಆರ್ಥಿಕ ಹಿಂಜರಿತದಿಂದ ಹಲವು ದೇಶಗಳಲ್ಲಿ ಉಂಟಾಗಿರುವ ಹಣದುಬ್ಬರ ಮತ್ತು ನಿರುದ್ಯೋಗ ಸೃಷ್ಟಿ ಹಾಗು ಈ ಪರಿಸ್ಥಿತಿಯಿಂದ ಹೊರಬರಲು ಭಾರತ ನಡೆಸುತ್ತಿರುವ ಪ್ರಯತ್ನದ ಕುರಿತು ಮಾತನಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ: ಜನವರಿ 30ಕ್ಕೆ ಸಮಾರೋಪ