ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಶನಿವಾರ ಎರಡು ದಿನಗಳ ಗುಜರಾತ್ ಭೇಟಿಯ ವೇಳೆ 21,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಹಾಗೂ ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದ ಶಾಶ್ವತ ಕ್ಯಾಂಪಸ್ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಬೆನ್ನಲ್ಲೇ ಸ್ವಾನಿಧಿ ಯೋಜನೆಯ ಫಲಾನುಭವಿ ಮಹಿಳೆಯರು ಬಿಂದಿಯೊಂದಿಗೆ 100 ಅಡಿ ಉದ್ದದ ಪೇಂಟಿಂಗ್ ಮಾಡಿದ್ದು, ಈ ಮೂಲಕ ಗುಜರಾತ್ ಜನರು ಪ್ರಧಾನಿಯನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ.
ಪ್ರಧಾನಮಂತ್ರಿಯವರು ಆರಂಭಿಸಿದ ಯೋಜನೆಯು ನಗರದ 6,000 ಕ್ಕೂ ಹೆಚ್ಚು ಮಹಿಳೆಯರ ಸ್ವಯಂ ಉದ್ಯೋಗ ಮತ್ತು ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದೆ. ಈ ಕಾರಣಕ್ಕೆ ಮಹಿಳೆಯರು ಈ ರೀತಿಯ ವಿಶೇಷ ಗೌರವ ನೀಡಲು ಮುಂದಾಗಿದ್ದಾರೆ.
ಗುಜರಾತ್ ಗೌರವ ಅಭಿಯಾನದಲ್ಲಿ ಭಾಗಿ: ಜೂನ್ 18ರಂದು ಪಾವಗಡ ಬೆಟ್ಟದಲ್ಲಿರುವ ಶ್ರೀ ಕಾಳಿಕಾ ಮಾತೆಯ ಪುನರಾಭಿವೃದ್ಧಿ ದೇವಸ್ಥಾನಕ್ಕೆ ಪ್ರಧಾನಿ ಭೇಟಿ ನೀಡಿ ಉದ್ಘಾಟನೆ ಮಾಡಲಿದ್ದು, ನಂತರ ವಿರಾಸತ್ ವನಕ್ಕೆ ಭೇಟಿ ನೀಡಲಿದ್ದಾರೆ. ಇದಾದ ನಂತರ ಮಧ್ಯಾಹ್ನ ವಡೋದರಾದಲ್ಲಿ ಗುಜರಾತ್ ಗೌರವ ಅಭಿಯಾನದಲ್ಲಿ ಭಾಗವಹಿಸಿ 21,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.
ರೈಲ್ವೆ ಯೋಜನೆಗಳ ಶಂಕುಸ್ಥಾಪನೆ: ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ವಡೋದರಾದಲ್ಲಿ ಗುಜರಾತ್ ಗೌರವ್ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. 16,000 ಕೋಟಿಗೂ ಅಧಿಕ ಮೊತ್ತದ ವಿವಿಧ ರೈಲ್ವೆ ಯೋಜನೆಗಳ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಈ ಯೋಜನೆಗಳು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ಉದ್ಯಮ ಮತ್ತು ಕೃಷಿ ಕ್ಷೇತ್ರಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
1.38 ಲಕ್ಷ ಮನೆಗಳ ಲೋಕಾರ್ಪಣೆ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ನಗರ ಪ್ರದೇಶದಲ್ಲಿ ಸುಮಾರು 1,800 ಕೋಟಿ ರೂಪಾಯಿ ಮೌಲ್ಯದ ಮನೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ 1,530 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಮನೆಗಳು ಸೇರಿದಂತೆ ಒಟ್ಟು 1.38 ಲಕ್ಷ ಮನೆಗಳನ್ನು ಪ್ರಧಾನ ಮಂತ್ರಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಜತೆಗೆ 310 ಕೋಟಿ ರೂ.ಗೂ ಅಧಿಕ ಮೌಲ್ಯದ ಸುಮಾರು 3,000 ಮನೆಗಳ ಖಟ್ ಮುಹೂರ್ತ ಕೂಡ ನಡೆಯಲಿದೆ.
ಗುಜರಾತ್‌ನ ದಭೋಯ್ ತಾಲೂಕಿನ ಕುಂಧೇಲಾ ಗ್ರಾಮದಲ್ಲಿ ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಡೋದರಾ ನಗರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ವಿಶ್ವವಿದ್ಯಾನಿಲಯವನ್ನು ಸುಮಾರು 425 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ ಮತ್ತು 2,500 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಅಗತ್ಯಗಳನ್ನು ಇದು ಪೂರೈಸುತ್ತದೆ.
ಮುಖ್ಯಮಂತ್ರಿ ಮಾತೃಶಕ್ತಿ ಯೋಜನೆಗೆ ಚಾಲನೆ: ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು 'ಮುಖ್ಯಮಂತ್ರಿ ಮಾತೃಶಕ್ತಿ ಯೋಜನೆ'ಯನ್ನು ಸಹ ಪ್ರಾರಂಭಿಸಲಿದ್ದು, ಇದು 800 ಕೋಟಿ ರೂ. ಯೋಜನೆಯಡಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಿಂದ ಎರಡು ಕೆಜಿ ಕಡಲೆ, ಒಂದು ಕೆಜಿ ತೊಗರಿಬೇಳೆ ಮತ್ತು ಒಂದು ಕೆಜಿ ಖಾದ್ಯ ಎಣ್ಣೆಯನ್ನು ಉಚಿತವಾಗಿ ನೀಡಲಾಗುತ್ತದೆ.
ರಾಜ್ಯದ ಎಲ್ಲಾ ಬುಡಕಟ್ಟು ಫಲಾನುಭವಿಗಳಿಗೆ ಈಗ ವಿಸ್ತರಿಸಲಾಗುತ್ತಿರುವ 'ಪೋಷನ್ ಸುಧಾ ಯೋಜನೆ'ಗೆ ಅವರು ಸುಮಾರು 120 ಕೋಟಿ ರೂ.ಗಳನ್ನು ವಿತರಿಸಲಿದ್ದಾರೆ. ಬುಡಕಟ್ಟು ಜಿಲ್ಲೆಗಳ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ನೀಡುವ ಮತ್ತು ಪೌಷ್ಟಿಕಾಂಶದ ಬಗ್ಗೆ ಶಿಕ್ಷಣ ನೀಡುವ ಪ್ರಯೋಗ ಯಶಸ್ವಿಯಾದ ನಂತರ ಈ ಹೆಜ್ಜೆ ಇಡಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಬದಿ ಡ್ರಗ್ಸ್ ಮಾರುತ್ತಿದ್ದ ತಾಂಜೇನಿಯಾದ ಮಹಿಳೆ ಬಂಧನ