ನವ ದೆಹಲಿ: ಚುನಾವಣೆಯಲ್ಲಿ ಬಿಜೆಪಿಗೆ ಸಿಗುತ್ತಿರುವ ಜನಬಲವು ವಂಶಪಾರಂಪರ್ಯ ಮತ್ತು ಭ್ರಷ್ಟಾಚಾರ ವಿರುದ್ಧದ ಆಕ್ರೋಶದ ಸಂಕೇತವಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರಿಗೆ ಎಲ್ಲ ಸೌಲಭ್ಯಗಳನ್ನು ತ್ವರಿತವಾಗಿ ತಲುಪಿಸುತ್ತಿರುವುದರಿಂದ ಬಿಜೆಪಿಗೆ ಜನ ಮತ ಹಾಕುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಗುಜರಾತ್‌ನಲ್ಲಿ ಬಿಜೆಪಿಯ ಪ್ರಚಂಡ ಗೆಲುವಿನ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ಇತಿಹಾಸದಲ್ಲಿ ಬಿಜೆಪಿಗೆ ಅತಿದೊಡ್ಡ ಜನಾದೇಶ ನೀಡುವ ಮೂಲಕ ಎಲ್ಲ ದಾಖಲೆಗಳೂ ಮುರಿದಿವೆ ಎಂದು ಹೇಳಿದರು.
ಗುಜರಾತ್ ಕಮಾಲ್ ಮಾಡಿಬಿಟ್ಟಿದೆ. 27 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಜನರು ಇನ್ನೂ ಬಿಜೆಪಿಯ ಮೇಲೆ ಅಪಾರ ಪ್ರೀತಿಯನ್ನು ತೋರಿಸಿದ್ದಾರೆ. ಹೀಗಾಗಿ ಭಾರಿ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ. ಬಿಜೆಪಿಯು ಗುಜರಾತ್ನ ಪ್ರತಿ ಮನೆ ಮತ್ತು ಕುಟುಂಬದ ಭಾಗವೇ ಆಗಿದೆ ಎಂದು ಮೋದಿ ಹೊಗಳಿದರು.
ಇದನ್ನೂ ಓದಿ: ಮೋದಿ ಮನವಿಗೆ ಗುಜರಾತ್ ಮಣೆ; ಹಿಮಾಚಲದಲ್ಲಿ ನಡೆಯದ ಕೇಸರಿ ಕಮಾಲ್: ಕಾರಣಗಳಿವು..
ಇದೇ ವೇಳೆ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ಮುಗಿಸಿದ ಚುನಾವಣಾ ಆಯೋಗಕ್ಕೂ ಧನ್ಯವಾದ ಹೇಳಿದ ಪ್ರಧಾನಿ, ನನಗೆ ತಿಳಿದಿರುವಂತೆ ಯಾವುದೇ ಮತಗಟ್ಟೆಯಲ್ಲಿ ಮರು ಮತದಾನದ ಅಗತ್ಯವಿಲ್ಲ ಎಂದರು.
ಹಿಮಾಚಲ ಪ್ರದೇಶದ ಮತದಾರರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಮತಗಳ ಸಂಖ್ಯೆಯ ನಡುವಿನ ವ್ಯತ್ಯಾಸ ಶೇ.1ಕ್ಕಿಂತ ಕಡಿಮೆ ಇದೆ. ಹಿಮಾಚಲದ ಪ್ರತಿಯೊಂದು ವಿಷಯವನ್ನು ಪೂರ್ಣ ಶಕ್ತಿಯೊಂದಿಗೆ ಬಿಜೆಪಿ ಪ್ರಸ್ತಾಪಿಸಲಿದೆ. ಕೇಂದ್ರ ಸರ್ಕಾರವು ಹಿಮಾಚಲಕ್ಕೆ ಎಲ್ಲ ರೀತಿಯಲ್ಲಿ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಪ್ರಜಾಪ್ರಭುತ್ವದಲ್ಲಿ ಸೋಲು, ಗೆಲುವು ಶಾಶ್ವತವಲ್ಲ: ಕಾಂಗ್ರೆಸ್ ಅಧ್ಯಕ್ಷ ಖರ್ಗೆ
ಇದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರಿಂದ ಗುಜರಾತ್‌ನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ಸಾಧ್ಯವಾಗಿದೆ. ಮೋದಿಯವರ ವಿಕಾಸವಾದವು ಈ ಬೃಹತ್ ಗೆಲುವಿನಲ್ಲಿ ಪ್ರತಿಫಲಿಸುತ್ತದೆ ಎಂದು ಹೇಳಿದರು.
ಹಿಮಾಚಲದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಗೆ ಅಭಿನಂದನೆ ಸಲ್ಲಿಸಿದ ನಡ್ಡಾ, ನಮ್ಮ ಪಕ್ಷವು ಕೇವಲ ಶೇ.0.90ರಷ್ಟು ಮತಗಳ ಅಂತರದಿಂದ ಸೋತಿದೆ. ನಾವು ಹಿಮಾಚಲದಲ್ಲಿ ಸರ್ಕಾರವನ್ನು ರಚನೆ ಮಾಡುವುದಿಲ್ಲ ನಿಜ. ಆದರೆ, ನಾವು ರಾಜ್ಯದ ರಾಜಕೀಯ ಇತಿಹಾಸದ ಟ್ರೆಂಡ್ ಬದಲಾಯಿಸಿದ್ದೇವೆ ಎಂದರು.
ಇದನ್ನೂ ಓದಿ: ಗುಜರಾತ್, ಹಿಮಾಚಲ ಫಲಿತಾಂಶ: ಜನಶಕ್ತಿಗೆ ತಲೆಬಾಗುತ್ತೇನೆ- ಮೋದಿ