ನವದೆಹಲಿ: ಸಣ್ಣ ಆನ್‌ಲೈನ್ ಪಾವತಿಗಗಳು ದೊಡ್ಡ ಡಿಜಿಟಲ್ ಆರ್ಥಿಕತೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತವೆ. ದೇಶದಲ್ಲೀಗ 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಡಿಜಿಟಲ್ ವಹಿವಾಟು ನಡೆಯುತ್ತಿದೆ. ಮುಂದೊಂದು ದಿನ ಇದರ ಹರಿವು ಇನ್ನಷ್ಟು ಹೆಚ್ಚಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಮಾಸಿಕ ಕಾರ್ಯಕ್ರಮವಾದ ಮನ್ ಕೀ ಬಾತ್ನಲ್ಲಿ ಡಿಜಿಟಲ್ ಪೇಮೆಂಟ್ ಬಗ್ಗೆ ಪ್ರಸ್ತಾಪಿಸಿದ ಅವರು, ದೇಶದಲ್ಲಿ ಈಗ ಪ್ರತಿದಿನ 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಡಿಜಿಟಲ್ ವಹಿವಾಟು ನಡೆಯುತ್ತಿದೆ. ಮಾರ್ಚ್ ತಿಂಗಳೊಂದರಲ್ಲೇ 10 ಲಕ್ಷ ಕೋಟಿ ರೂಪಾಯಿ ಆನ್‌ಲೈನ್ ವಹಿವಾಟು ನಡೆದಿದೆ. ಇದು ಆರ್ಥಿಕ ಸೌಲಭ್ಯಗಳನ್ನು ಹೆಚ್ಚಿಸುವುದಲ್ಲದೆ ಪ್ರಾಮಾಣಿಕತೆಯ ವಾತಾವರಣವನ್ನೂ ಉತ್ತೇಜಿಸಿದೆ ಎಂದರು.
ಸಣ್ಣ ಆನ್‌ಲೈನ್ ಪಾವತಿಗಳು ದೊಡ್ಡ ಡಿಜಿಟಲ್ ಆರ್ಥಿಕತೆಯನ್ನು ನಿರ್ಮಿಸಲು ಸಹಾಯ ಮಾಡುತ್ತಿವೆ. ಅನೇಕ ಹೊಸ ಫಿನ್‌ಟೆಕ್ ಸ್ಟಾರ್ಟಪ್‌ಗಳು ಬರಲಿವೆ. ಡಿಜಿಟಲ್ ಪಾವತಿಗಳು ಮತ್ತು ಸ್ಟಾರ್ಟಪ್ ಬಗ್ಗೆ ಮಾಹಿತಿ ಹೊಂದಿದ ಜನರು ಇತರರೊಂದಿಗೆ ತಮ್ಮ ಅನುಭವ ಹಂಚಿಕೊಂಡು ಅವರಿಗೂ ಇದರ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.
ಪ್ರಧಾನಿಗಳ ಮ್ಯೂಸಿಯಂಗೆ ಭೇಟಿ ನೀಡಿ: ಇತ್ತೀಚೆಗಷ್ಟೇ ಉದ್ಘಾಟನೆಯಾದ ಪ್ರಧಾನಮಂತ್ರಿಗಳ ಸಂಗ್ರಹಾಲಯದ ಕುರಿತು ಮಾತನಾಡಿದ ಮೋದಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14 ರಂದು ಉದ್ಘಾಟನೆಗೊಂಡ ಪ್ರಧಾನಮಂತ್ರಿ ಸಂಗ್ರಹಾಲಯದ ಬಗ್ಗೆ ದೇಶಾದ್ಯಂತ ಜನರು ಪತ್ರ ಮತ್ತು ಸಂದೇಶಗಳನ್ನು ಬರೆದು ಕಳುಹಿಸುತ್ತಿದ್ದಾರೆ. ದೇಶಕ್ಕೆ ಎಲ್ಲ ಪ್ರಧಾನಿಗಳು ನೀಡಿದ ಕೊಡುಗೆಯನ್ನು ಸ್ಮರಿಸುವ ಸಮಯ ಬಂದಿದೆ ಎಂದು ಹೇಳಿದರು.
ರಜಾದಿನಗಳಲ್ಲಿ ಪ್ರಧಾನಿಗಳ ಸಂಗ್ರಹಾಲಯ ಸೇರಿದಂತೆ ಸ್ಥಳೀಯ ಮ್ಯೂಸಿಯಂಗಳಗೆ ಭೇಟಿ ನೀಡಿ ಸಾಧಕರ ಬಗ್ಗೆ ನಿಮ್ಮ ಕುಟುಂಬಸ್ಥರಿಗೆ ಪರಿಚಯ ಮಾಡಿಕೊಡಿ. ಅಲ್ಲದೇ, 'ಮ್ಯೂಸಿಯಂ ಮೆಮೊರೀಸ್' ಎಂಬ ಹ್ಯಾಶ್‌ಟ್ಯಾಗ್ ಬಳಸಿ ಅನುಭವಗಳನ್ನು ಹಂಚಿಕೊಳ್ಳುವಂತೆಯೂ ಮೋದಿ ಮನವಿ ಮಾಡಿದರು.
ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಆಳವಾಗಿವೆ: ಪ್ರಧಾನಿ ಮೋದಿ