ನವದೆಹಲಿ : ಸಿಖ್ಖರ 10ನೇ ಪ್ರಮುಖ ಗುರುಗಳಾದ ಗುರುಗೋವಿಂದ ಸಿಂಗ್ ಅವರ ಪುತ್ರರ ಸ್ಮರಣಾರ್ಥವಾಗಿ ಆಯೋಜಿಸಲಾಗುವ 'ವೀರ್ ಬಾಲ್ ದಿವಸ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಇಲ್ಲಿನ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಬಾದ್ ಕೀರ್ತನೆ ಹಾಡಿದರು. ವೀರ್ ಬಾಲ್ ದಿವಸ್ ನಿಮಿತ್ತ ಸುಮಾರು 3,000 ವಿದ್ಯಾರ್ಥಿಗಳಿಂದ ಪಥ ಸಂಚಲನ ಮತ್ತು ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದ್ದು, ಪ್ರಧಾನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಐತಿಹಾಸಿಕ ಸಂದರ್ಭವನ್ನು ಸ್ಮರಣೀಯಗೊಳಿಸಲು ಕೇಂದ್ರ ಸರ್ಕಾರವು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ವಿಶೇಷವಾಗಿ ಮಕ್ಕಳಿಗೆ ಸಾಹಿಬ್ ಜಾದಾಸ್ ಅವರ ಧೈರ್ಯದ ಬಗ್ಗೆ ತಿಳಿಸಲಾಗುತ್ತಿದೆ. 'ವೀರ್ ಬಾಲ್ ದಿವಸ್ ಸಂದರ್ಭದಲ್ಲಿ ನಾವು ಸಾಹಿಬ್ ಜಾದಾಸ್ ಮತ್ತು ಮಾತಾ ಗುಜ್ರಿ ಜಿಯವರ ಧೈರ್ಯಗಾಥೆಯನ್ನು ಸ್ಮರಿಸುತ್ತೇವೆ. ಜೊತೆಗೆ ಶ್ರೀ ಗುರುಗೋವಿಂದ್ ಸಿಂಗ್ ಜಿ ಅವರ ಸಾಹಸಗಾಥೆಯನ್ನೂ ನೆನಪಿಸಿಕೊಳ್ಳುತ್ತೇವೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ದೇಶಾದ್ಯಂತ ಮಕ್ಕಳಿಗಾಗಿ ಪ್ರಬಂಧ ಬರವಣಿಗೆ, ರಸಪ್ರಶ್ನೆ ಸ್ಪರ್ಧೆಗಳು ಮತ್ತು ಇತರ ಚಟುವಟಿಕೆಗಳನ್ನು ಶಾಲಾ ಕಾಲೇಜುಗಳಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕ ಸ್ಥಳಗಳಾದ ರೈಲ್ವೇ ನಿಲ್ದಾಣಗಳು, ಪೆಟ್ರೋಲ್ ಪಂಪ್‌ಗಳು, ವಿಮಾನ ನಿಲ್ದಾಣಗಳಲ್ಲಿ ಡಿಜಿಟಲ್ ಪ್ರದರ್ಶನ ಮಾಡಲಾಗಿದೆ.
ದಿನ ವಿಶೇಷತೆ: ಸಿಖ್ ಸಮುದಾಯದ ಕೊನೆಯ ಗುರು ಗುರು ಗೋವಿಂದ್ ಸಿಂಗ್ರ ನಾಲ್ವರು ಪುತ್ರರ ಧೈರ್ಯಕ್ಕೆ ಗೌರವ ಸಲ್ಲಿಸಲು ಡಿಸೆಂಬರ್ 26 ಅನ್ನು ಪ್ರತಿ ವರ್ಷ 'ವೀರ್ ಬಾಲ್ ದಿವಸ್' ಎಂದು ಘೋಷಿಸಲಾಗುವುದು ಎಂದು ಪ್ರಧಾನಿ ಹೇಳಿದ್ದರು. ಇದು ಪಂಜಾಬ್‌ನಲ್ಲಿ ಮೊಘಲರಿಂದ ಕೊಲ್ಲಲ್ಪಟ್ಟ ಸಾಹಿಬ್ ಜಾದಾಸ್ ಜೋರಾವರ್ ಸಿಂಗ್ ಮತ್ತು ಫತೇಹ್ ಸಿಂಗ್ ಅವರು ಹುತಾತ್ಮರಾದ ದಿನವಾಗಿದೆ.
ಇದನ್ನೂ ಓದಿ: ಐದು ದಿನಗಳ ಪ್ರವಾಸ ಕೈಗೊಂಡ ರಾಷ್ಟ್ರಪತಿ ದ್ರೌಪದಿ ಮುರ್ಮು