ನವದೆಹಲಿ: ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಕೊರೊನಾ ಶುರುವಾದಾಗ ಯಾವ ದೇಶವೂ ಅದನ್ನು ಎದುರಿಸಲು ಸಿದ್ಧವಾಗಿರಲಿಲ್ಲ. ಆಗ ಯೋಗ ಆಂತರಿಕ ಶಕ್ತಿಯ ಮೂಲವಾಯಿತು ಎಂದು ಪ್ರಧಾನಿ ಮೋದಿ ಹೇಳಿದರು.
ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು. ಪ್ರಸ್ತುತ ಇಡೀ ಜಗತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವಾಗ ಯೋಗವು ಭರವಸೆಯ ಆಶಾಕಿರಣವಾಗಿದೆ. ಈಗ ಎರಡು ವರ್ಷಗಳಿಂದ, ಭಾರತದಲ್ಲಿ ಅಥವಾ ಪ್ರಪಂಚದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿಲ್ಲ. ಆದರೆ ಯೋಗದ ಉತ್ಸಾಹ ಕಡಿಮೆಯಾಗಿಲ್ಲ ಎಂದು ಮೋದಿ ಹೇಳಿದರು.
ಕೊರೊನಾ ವಿರುದ್ಧ ಯೋಗ:
ಈ ಅಂತಾರಾಷ್ಟ್ರೀಯ ಯೋಗ ದಿನದ ‘ಯೋಗಾ ಫಾರ್ ವೆಲ್ನೆಸ್’ ಥೀಮ್ ಜನರನ್ನು ಇನ್ನಷ್ಟು ಪ್ರೋತ್ಸಾಹಿಸಿದೆ. ಪ್ರತಿ ದೇಶ, ಪ್ರದೇಶ ಮತ್ತು ಜನರು ಆರೋಗ್ಯವಾಗಿರಲು ನಾನು ಪ್ರಾರ್ಥಿಸುತ್ತೇನೆ. ಇಂದು ವೈದ್ಯಕೀಯ ವಿಜ್ಞಾನವು ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಗುಣಪಡಿಸುವ ಪ್ರಕ್ರಿಯೆಗೆ ಒತ್ತು ನೀಡುತ್ತದೆ. ಗುಣಪಡಿಸುವ ಪ್ರಕ್ರಿಯೆಯಲ್ಲಿ ಯೋಗ ಸಹಾಯ ಮಾಡುತ್ತದೆ. ವೈದ್ಯರು ಯೋಗವನ್ನು ಸ್ವಯಂ ಅಸ್ತ್ರವಾಗಿ ಬಳಸಿದ್ದಾರೆ ಎಂದರು.
ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಯೋಗವನ್ನು ರಕ್ಷಾಕವಚವಾಗಿ ಬಳಸಿದ್ದಾರೆ. ಆಸ್ಪತ್ರೆಗಳ ದೃಶ್ಯಗಳನ್ನು ನಾವು ನೋಡಿದ್ದೇವೆ ವೈದ್ಯರು, ದಾದಿಯರು ಯೋಗವನ್ನು ಕಲಿಸುತ್ತಾ ಅನುಲೋಮ, ವಿಲೋಮ ಸೇರಿದಂತೆ ಪ್ರಾಣಾಯಾಮಗಳನ್ನು ಮಾಡಿಸುತ್ತಾರೆ. ಈ ವ್ಯಾಯಾಮಗಳು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತವೆ ಎಂದು ಅಂತಾರಾಷ್ಟ್ರೀಯ ತಜ್ಞರು ಹೇಳಿದ್ದಾರೆ ಎಂದು ತಿಳಿಸಿದರು.
M-Yoga ಅಪ್ಲಿಕೇಶನ್:
ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದೊಂದಿಗೆ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಈಗ M-Yoga ಅಪ್ಲಿಕೇಶನ್ ಬರಲಿದ್ದು, ಇದು ವಿಶ್ವದಾದ್ಯಂತ ಜನರಿಗೆ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವಿಡಿಯೋಗಳನ್ನು ಹೊಂದಿರುತ್ತದೆ. ಇದು ನಮ್ಮ 'ಒಂದು ವಿಶ್ವ, ಒಂದು ಆರೋಗ್ಯ' ಧ್ಯೇಯಕ್ಕೆ ನೆರವಾಗಲಿದೆ ಎಂದು ಮಾಹಿತಿ ನೀಡಿದರು.
ಯೋಗ ಆತ್ಮಬಲದ ಸಾಧನ:
ಹಲವು ಶಾಲೆಗಳು ಆನ್ಲೈನ್ ತರಗತಿಯಲ್ಲಿ ಯೋಗ ಸೇರಿಸಿವೆ. ಯೋಗ ಸಂಯಮ ಕಾಪಾಡಲು ಸಹಕಾರಿ. ಯೋಗಾಭ್ಯಾಸದಿಂದ ಕೇವಲ ಶಾರೀರಿಕ ಮಾತ್ರವಲ್ಲ, ಆಂತರಿಕ ಶಕ್ತಿ ಕೂಡ ವೃದ್ಧಿಸುತ್ತದೆ. ಪ್ರಸ್ತುತ ಕಠಿಣ ಸಂದರ್ಭದಲ್ಲಿ ಯೋಗ ಆತ್ಮಬಲದ ಸಾಧನ.
ಯೋಗದ ಬಗ್ಗೆ ವೈಜ್ಞಾನಿಕ ಸಂಶೋಧನೆ:
ತಮಿಳಿನ ಪ್ರಸಿದ್ಧ ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಹೇಳಿದ ಮಾತು ಯೋಗದಿಂದ ಸಾಬೀತಾಗಿದೆ. ಕೊರೊನಾ ಎದುರಿಸಲು ಯೋಗದ ಪಾತ್ರದ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಯೋಗದ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿವೆ. ಯೋಗಾಭ್ಯಾಸ ಮಾಡುವವರ ಮೇಲೆ ವಿಜ್ಞಾನಿಗಳು ಪ್ರಯೋಗ ನಡೆಸುತ್ತಿದ್ದಾರೆ. ಯೋಗ ಅನಾಹುತ, ಋಣಾತ್ಮಕತೆಯಿಂದ ನಮ್ಮನ್ನು ತಡೆಯುತ್ತದೆ ಎಂದು ಹೇಳಿದರು.
‘ವಸುಧೈವ ಕುಟುಂಬಕಂ’ಗೆ ಜಾಗತಿಕ ಮಾನ್ಯತೆ:
ಭಾರತ ಅನಾದಿ ಕಾಲದಿಂದ ಅನುಸರಿಸುತ್ತಿರುವ ‘ವಸುಧೈವ ಕುಟುಂಬಕಂ’ ಮಂತ್ರ ಈಗ ಜಾಗತಿಕ ಮಾನ್ಯತೆಯನ್ನು ಪಡೆದುಕೊಳ್ಳುತ್ತಿದೆ. ನಾವೆಲ್ಲರೂ ಪರಸ್ಪರರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ. ವಿಶ್ವದ ಮೂಲೆ, ಮೂಲೆಯಲ್ಲಿ ಲಕ್ಷಾಂತರ ಜನ ಇಂದು ಯೋಗ ಸಾಧನೆ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.