ಗಾಂಧಿನಗರ (ಗುಜರಾತ್): ಹರಿಯಾಣಕ್ಕಾಗಿ ಮಾರುತಿ ಸುಜುಕಿ ವಾಹನ ತಯಾರಿಕಾ ಸೌಲಭ್ಯ ಮತ್ತು ಗುಜರಾತ್‌ನ ಹಂಸಲ್‌ಪುರದಲ್ಲಿ 7,300 ಕೋಟಿ ರೂಪಾಯಿ ವೆಚ್ಚದ ಸುಜುಕಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.
ಭಾರತದಲ್ಲಿ ಸುಜುಕಿ ಕಂಪನಿಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ಗಾಂಧಿನಗರದಲ್ಲಿ ನಡೆದ ಸಮಾರಂಭದಲ್ಲಿ ಈ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಾರುತಿ-ಸುಜುಕಿಯ ಯಶಸ್ಸು ಭಾರತ-ಜಪಾನ್ ಸಹಭಾಗಿತ್ವವನ್ನು ಸಹ ಸೂಚಿಸುತ್ತದೆ ಎಂದರು. ಇದೇ ವೇಳೆ ಜಪಾನ್‌ನ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರನ್ನೂ ಮೋದಿ ಸ್ಮರಿಸಿದರು.
ಮಾರುತಿಯ ಯಶಸ್ಸು ಭಾರತ-ಜಪಾನ್ ಬಾಂಧವ್ಯದ ಬಲಕ್ಕೆ ಉತ್ತಮ ಉದಾಹರಣೆಯಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ಈ ಸಂಬಂಧವು ಹೊಸ ಎತ್ತರವನ್ನು ತಲುಪಿದೆ. ಭಾರತವು ಸಿಒಪಿ 26 (ಹವಾಮಾನ ಶೃಂಗಸಭೆ)ರಲ್ಲಿ 2030ರ ವೇಳೆಗೆ ಪಳೆಯುಳಿಕೆ ರಹಿತ ಮೂಲಗಳಿಂದ ಶೇ.50ರಷ್ಟು ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವುದಾಗಿ ಘೋಷಿಸಿದೆ. ಮುಂದಿನ 25 ವರ್ಷಗಳಲ್ಲಿ ಇಂಧನ ಅಗತ್ಯತೆಯ ವಿಷಯದಲ್ಲಿ ಭಾರತವು ಸ್ವಾವಲಂಬಿಯಾಗಲು ನಿರ್ಧರಿಸಿದೆ ಎಂದು ಮೋದಿ ಹೇಳಿದರು.
ನಾವು ಎಲೆಕ್ಟ್ರಿಕ್ ವಾಹನಗಳ ವ್ಯವಸ್ಥೆಯ ಪೂರೈಕೆ ಮತ್ತು ಬೇಡಿಕೆ ಎರಡರಲ್ಲೂ ವೇಗವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ತೆರಿಗೆಯಲ್ಲಿ ಸಡಿಲಿಕೆಯಿಂದ ಸುಲಭವಾದ ಸಾಲ ಸೌಲಭ್ಯದವರೆಗೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಜೊತೆಗೆ ಆಟೋ ಮೊಬೈಲ್‌ನಿಂದ ಜೈವಿಕ ಇಂಧನ ಕ್ಷೇತ್ರದವರೆಗೆ 125ಕ್ಕೂ ಹೆಚ್ಚು ಜಪಾನಿನ ಕಂಪನಿಗಳು ಗುಜರಾತ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಹಂಸಲ್‌ಪುರದಲ್ಲಿ ಸುಜುಕಿ ಮೋಟಾರ್ ಗುಜರಾತ್ ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿ ಉತ್ಪಾದನಾ ಸೌಲಭ್ಯವನ್ನು ಸುಮಾರು 7,300 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್ ಬ್ಯಾಟರಿಗಳನ್ನು ತಯಾರಿಸುವ ಯೋಜನೆ ಇದಾಗಿದೆ.
ಇತ್ತ, ಹರಿಯಾಣದ ಖಾರ್ಖೋಡಾದಲ್ಲಿರುವ ವಾಹನ ತಯಾರಿಕಾ ಘಟಕವು ವರ್ಷಕ್ಕೆ 10 ಲಕ್ಷ ಪ್ರಯಾಣಿಕ ವಾಹನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಪ್ರಯಾಣಿಕ ವಾಹನ ಉತ್ಪಾದನಾ ಸೌಲಭ್ಯಗಳಲ್ಲಿ ಒಂದಾಗಿದೆ. ಮೊದಲ ಹಂತದ ಯೋಜನೆಯು ಸುಮಾರು11,000 ಕೋಟಿ ರೂ.ಗಳಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ: ಪ್ರಧಾನಿ ಮೋದಿ