ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಸುಮಾರು 614 ಕೋಟಿ ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದರು. ಬಳಿಕ ಯೋಜನೆಯ ಮೂವರು ಫಲಾನುಭವಿಗಳೊಂದಿಗೆ ಚರ್ಚೆ ನಡೆಸಿದರು.
ಬನಾರಸ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು, ಸರ್ಕಾರ ಕೈಗೊಂಡ ನಿರ್ಧಾರಗಳಿಂದ ಬನಾರಸ್‌ನ ಜನರು ಲಾಭ ಪಡೆಯುತ್ತಿದ್ದಾರೆ. ಈ ಎಲ್ಲ ಕಾರ್ಯಗಳ ಹಿಂದೆ ಬಾಬಾ ವಿಶ್ವನಾಥ್ ಅವರ ಆಶೀರ್ವಾದವಿದೆ. ಮಹಾದೇವನ ಆಶೀರ್ವಾದದಿಂದ ಕಾಶಿಯನ್ನು ಎಂದಿಗೂ ತಡೆಯಲಾಗುವುದಿಲ್ಲ. ತಾಯಿ ಗಂಗಾಳಂತೆ ಕೊರೊನಾ ಸಂಕಷ್ಟದ ಸಮಯದಲ್ಲೂ ಕಾಶಿ ಮುನ್ನಡೆಯುತ್ತಲೆ ಇದೆ ಎಂದು ಪ್ರಧಾನಿ ಹೇಳಿದರು.
ಪ್ರಧಾನಿ ಸುಮಾರು 220 ಕೋಟಿ ರೂ ವೆಚ್ಚದ 16 ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಸುಮಾರು 400 ಕೋಟಿ ರೂ ವೆಚ್ಚದ 14 ಯೋಜನೆಗಳಿಗೆ ಚಾಲನೆ ನೀಡಿದರು. ಪ್ರವಾಸೋದ್ಯಮದ ಜೊತೆಗೆ ಬನಾರಸ್‌ನ ನಗರ ಮತ್ತು ಗ್ರಾಮಾಂತರ ಪ್ರದೇಶದ ಅಭಿವೃದ್ಧಿ ಯೋಜನೆಗಳಲ್ಲಿ ಇಲ್ಲಿನ ಸಂಸ್ಕೃತಿ, ರಸ್ತೆಗಳು, ವಿದ್ಯುತ್, ನೀರು ಒಳಗೊಂಡಿದೆ. ಕಾಶಿಯ ಪ್ರತಿಯೊಬ್ಬ ವ್ಯಕ್ತಿಯ ಭಾವನೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯ ಮುಂದುವರೆಯಲಿದೆ ಎಂದು ಪ್ರಧಾನಿ ತಿಳಿಸಿದರು.
ಗಂಗಾ ಕ್ರಿಯಾ ಯೋಜನೆಯಡಿ ಕಾಶಿಯಲ್ಲಿ ಒಳಚರಂಡಿ ಸಂಸ್ಕರಣಾ ಘಟಕದ ಕಾಮಗಾರಿ ಪೂರ್ಣಗೊಂಡಿದೆ. ಇದರೊಂದಿಗೆ, ಸಾಹೀ ಚರಂಡಿಯಿಂದ ಗಂಗಾ ನದಿಗೆ ಹರಿಯುವ ಕೊಳಚೆ ನೀರನ್ನು ಬೇರೆಡೆ ತಿರುಗಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಸಾರನಾಥ್ ಲೈಟ್ ಅಂಡ್ ಸೌಂಡ್ ಶೋ, ರಾಮನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆ ನವೀಕರಣ, ಒಳಚರಂಡಿಗೆ ಸಂಬಂಧಿಸಿದ ಕೆಲಸ, ಹಸುಗಳ ಸಂರಕ್ಷಣೆಗೆ ಮೂಲ ಸೌಕರ್ಯ, ವಿವಿಧೋದ್ದೇಶ ಬೀಜದ ಅಂಗಡಿ, 100 ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳ ಗೋಡೌನ್, ಐಪಿಡಿಎಸ್ ಹಂತ 2 ಉದ್ಘಾಟನೆಗೊಂಡ ಯೋಜನೆಗಳಲ್ಲಿ ಒಳಗೊಂಡಿದೆ.
ದಶಾವಾಮೇದ್ ಘಾಟ್ ಮತ್ತು ಖಿಡ್ಕಿಯಾ ಘಾಟ್ ಅಭಿವೃದ್ಧಿ, ಪಿಎಸಿ ಪೊಲೀಸ್ ಪಡೆಗೆ ಬ್ಯಾರಕ್, ಕಾಶಿಯ ಕೆಲವು ವಾರ್ಡ್‌ಗಳ ಅಭಿವೃದ್ಧಿ, ಬೆನಿಯಾಬಾಗ್‌ನ ಉದ್ಯಾನದ ಅಭಿವೃದ್ಧಿ ಮತ್ತು ಪಾರ್ಕಿಂಗ್ ಸೌಲಭ್ಯ, ಗಿರಿಜಾ ದೇವಿ ಸಂಸ್ಕೃತ ಶಂಕುಲ್ ಬಹುಪಯೋಗಿ ಸಭಾಂಗಣ ನವೀಕರಣ, ನಗರದ ರಸ್ತೆ ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು. ಕಾರ್ಯಕ್ರಮವು ವಾರಣಾಸಿಯ ಆರು ಸ್ಥಳಗಳಿಂದ ನೇರ ಪ್ರಸಾರ ಮಾಡಲಾಯಿತು.