ನವದೆಹಲಿ: ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿ ನಿರ್ಮಿಸಲಾಗಿರುವ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ ಮಂತ್ರಘೋಷಗಳ ಪಠಣದ ನಡುವೆ ಉದ್ಘಾಟಿಸಿದರು. ಸ್ಪೀಕರ್ ಪೀಠದ ಬಳಿಕ ಚಿನ್ನದ ರಾಜದಂಡವನ್ನು ಪ್ರತಿಷ್ಠಾಪಿಸಿ ಗತವೈಭವವನ್ನು ಮೆರೆದರು.
ಇಂದು ಬೆಳಗ್ಗೆ 7.15 ಕ್ಕೆ ಸಾಂಪ್ರದಾಯಿಕ ಬಿಳಿ ಉಡುಗೆಯಲ್ಲಿ ಪ್ರಧಾನಿ ಮೋದಿ ಅವರು ಗೇಟ್ ನಂ.1 ರಿಂದ ಸಂಸತ್ ಆವರಣಕ್ಕೆ ಆಗಮಿಸಿದರು. ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು. ಮಹಾತ್ಮ ಗಾಂಧಿ ಪ್ರತಿಮೆ ಪಕ್ಕದಲ್ಲಿ ಆಯೋಜಿಸಿದ್ದ ಪೂಜಾ ವಿಧಾನಗಳಲ್ಲಿ ಇಬ್ಬರೂ ಭಾಗಿಯಾದರು. ಕರ್ನಾಟಕದ ಶೃಂಗೇರಿ ಮಠದ ಪುರೋಹಿತರು ವೇದ ಘೋಷಗಳನ್ನು ಪಠಿಸಿದರು. ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭ ಸಾಂಘವಾಗಿ ನಡೆಯಲು "ಗಣಪತಿ ಹೋಮ" ನಡೆಸಲಾಯಿತು.
ರಾಜದಂಡ ಸೆಂಗೋಲ್ ಹಸ್ತಾಂತರ: ಪೂಜಾ ವಿಧಾನಗಳು ಮುಗಿದ ಬಳಿಕ ಬಹುಚರ್ಚಿತ ರಾಜದಂಡವಾದ 'ಸೆಂಗೋಲ್' ಅನ್ನು ತಮಿಳುನಾಡಿನ ವಿವಿಧ ಅಧೀನಂಗಳಿಂದ ಪ್ರಧಾನಿ ಮೋದಿ ಅವರಿಗೆ ಹಸ್ತಾಂತರ ಮಾಡಲಾಯಿತು. ಪೂಜ್ಯರ ಆಶೀರ್ವಾದ ಪಡೆದ ಪ್ರಧಾನಿಗಳು, ಅದರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಬಳಿಕ ಪವಿತ್ರ ರಾಜದಂಡದೊಂದಿಗೆ ಮೋದಿ ಅವರು ನಾದಸ್ವರ ಮತ್ತು ವೇದ ಮಂತ್ರಗಳ ಪಠಣಗಳ ನಡುವೆ ಮೆರವಣಿಗೆಯಲ್ಲಿ ಹೊಸ ಸಂಸತ್ ಭವನಕ್ಕೆ ಸೆಂಗೋಲ್ ಅನ್ನು ಕೊಂಡೊಯ್ದರು.
![ಸ್ಪೀಕರ್ ಪೀಠದ ಬಳಿ ಸೆಂಗೋಲ್ ಪ್ರತಿಷ್ಠಾಪನೆ](https://etvbharatimages.akamaized.net/etvbharat/prod-images/18613717_parliment.jpg)
ಲೋಕಸಭೆಯ ಸಭಾಂಗಣದಲ್ಲಿ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ನಿಗದಿಪಡಿಸಲಾಗಿದ್ದ ವಿಶೇಷ ಆವರಣದಲ್ಲಿ ರಾಜದಂಡವನ್ನು ಸ್ಪೀಕರ್ ಓಂ ಬಿರ್ಲಾ ಅವರ ಸಮೇತ ತೆರಳಿ ಅಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿ ಇಡಲಾಗಿದ್ದ ಜ್ಯೋತಿಯನ್ನ ಬೆಳಗಿಸುವ ಮೂಲಕ ನೂತನ ಸಂಸತ್ ಭವನದ ಉದ್ಘಾಟನೆಗೆ ಅಧಿಕೃತ ಚಾಲನೆ ನೀಡಿದರು.
ಕಟ್ಟಡ ಕಾರ್ಮಿಕರಿಗೆ ಸನ್ಮಾನ: ಸೆಂಗೋಲ್ ಸ್ಥಾಪನೆಯ ಬಳಿಕ ಅಲ್ಲಿಂದ ಹೊರಬಂದ ಪ್ರಧಾನಿ ಮೋದಿ ಅವರು, ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕೆಲ ಕಾರ್ಮಿಕರಿಗೆ ಗೌರವ ಸಲ್ಲಿಸಿದರು. ಶಾಲು ಮತ್ತು ಸ್ಮರಣಿಗೆ ನೀಡಿ ಅವರನ್ನು ಸನ್ಮಾನಿಸಿದರು.
ಸರ್ವಧರ್ಮ ಸಮ್ಮೇಳನ: ಇದಾದ ಬಳಿಕ ಸಂಸತ್ನ ಲಾಬಿಯಲ್ಲಿ ಏರ್ಪಡಿಸಲಾಗಿದ್ದ ಸರ್ವಧರ್ಮ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿದರು. ಹಿಂದೂ, ಮುಸ್ಲಿಂ, ಜೈನ, ಬೌದ್ಧ, ಕ್ರೈಸ್ತ ಧರ್ಮ ಸೇರಿದಂತೆ ಎಲ್ಲ ಧರ್ಮಗಳ ಮುಖಂಡರು ಪ್ರಾರ್ಥನೆ ಸಲ್ಲಿಸಿದರು. ನೂತನ ಸಂಸತ್ ಕಟ್ಟಡವು ಐತಿಹಾಸಿಕ ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಗಲಿ ಎಂದು ಹರಸಿದರು.
![ಸ್ಪೀಕರ್ ಪೀಠದ ಬಳಿ ಸೆಂಗೋಲ್ ಪ್ರತಿಷ್ಠಾಪನೆ](https://etvbharatimages.akamaized.net/etvbharat/prod-images/18613717_parlimenta.jpg)
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಎಸ್ ಜೈಶಂಕರ್ ಮತ್ತು ಜಿತೇಂದ್ರ ಸಿಂಗ್, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮಧ್ಯಾಹ್ನದ ವೇಳೆ ವಿವಿಧ ಕಾರ್ಯಕ್ರಮಗಳು ಮರು ಆರಂಭವಾಗಲಿವೆ. ಪ್ರಧಾನಿ ಮೋದಿ ಭಾಷಣ, ವಿಶೇಷ ನಾಣ್ಯ ಬಿಡುಗಡೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ: ಇಂದು 'ಪ್ರಜಾಪ್ರಭುತ್ವದ ಹೊಸ ದೇಗುಲ' ಉದ್ಘಾಟನೆ: ಈ ದಿನ ಏನೆಲ್ಲಾ ಕಾರ್ಯಕ್ರಮಗಳು?