ನವದೆಹಲಿ: ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು, ಜಮ್ಮು- ಕಾಶ್ಮೀರವನ್ನು ಕ್ರೀಡಾ ಕೇಂದ್ರವನ್ನಾಗಿ ಮಾಡಲು ಖೇಲೋ ಇಂಡಿಯಾ ಗೇಮ್ಸ್ ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಎಂ ಮೋದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕ್ರೀಡೆ ಕೇವಲ ಹವ್ಯಾಸ ಅಥವಾ 'ಟೈಮ್ ಪಾಸ್' ಅಲ್ಲ. ಕ್ರೀಡೆಗಳಲ್ಲಿ ನಾವು ತಂಡದ ಉತ್ಸಾಹವನ್ನು ಕಾಣುತ್ತೇವೆ, ಸೋಲಿನಿಂದ ಹೊಸತನ್ನು ಕಲಿಯುತ್ತೇವೆ. ಮತ್ತೆ ಮತ್ತೆ ವಿಜಯಶಾಲಿಗಳಾಗಲು ಪ್ರಯತ್ನಿಸುತ್ತೇವೆ. ಕ್ರೀಡೆ ಆಟಗಾರರ ಜೀವನ ಮತ್ತು ಜೀವನಶೈಲಿಯನ್ನು ರೂಪಿಸುತ್ತದೆ, ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದರು.
ಇದನ್ನೂ ಓದಿ: ಇಂದು ಕೇಂದ್ರ ಚುನಾವಣಾ ಆಯೋಗದಿಂದ ಪಂಚರಾಜ್ಯ ಚುನಾವಣೆಗೆ ದಿನಾಂಕ ಘೋಷಣೆ
ಈ ಕ್ರೀಡಾಕೂಟಗಳು 'ಏಕ್ ಭಾರತ್, ಶ್ರೇಷ್ಠ ಭಾರತ್' ಎಂಬ ಸಂಕಲ್ಪವನ್ನು ಬಲಪಡಿಸುತ್ತದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು- ಕಾಶ್ಮೀರದ ಪ್ರವಾಸೋದ್ಯಮವನ್ನೂ ಉತ್ತೇಜಿಸಲಿವೆ ಎಂದು ಪ್ರಧಾನಿ ಹೇಳಿದರು.
ಇಂದಿಂದ ಮಾರ್ಚ್ 2ರ ವರೆಗೆ ನಡೆಯಲಿರುವ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ 27 ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳಲ್ಲಿದ್ದಾರೆ. ಐಸ್ ಸ್ಕೇಟಿಂಗ್, ಐಸ್ ಹಾಕಿ, ಸ್ಕೈ ಮೌಂಟೇನೇರಿಂಗ್ ಸೇರಿದಂತೆ ವಿವಿಧ ಕ್ರೀಡೆಗಳು ಇರಲಿವೆ.