ನವದೆಹಲಿ: ಕನ್ನಡ ಭಾಷೆ ಸುಂದರವಾಗಿದೆ ಜೊತೆಗೆ ಇದರ ಸಾಹಿತ್ಯ ಸಮೃದ್ಧವಾಗಿದೆ. ಈ ಭಾಷೆಯ ವಿಶೇಷವೆಂದ್ರೆ ಕನ್ನಡ ಮಾತನಾಡುವುದರಿಂದ ಓದುವ ಹವ್ಯಾಸ ಹೆಚ್ಚುತ್ತದೆ ಎಂದು ಕನ್ನಡ ನಾಡು ನುಡಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಡಿಹೊಗಳಿದರು.
ದೆಹಲಿ ಕರ್ನಾಟಕ ಸಂಘದ 75 ವರ್ಷದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಟಾಲ್ಕಟೋರ ಸಭಾಂಗಣದಲ್ಲಿ ಆಯೋಜಿಸಿದ ಬಾರಿಸು ಕನ್ನಡ ಡಿಂಡಿಮವ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಎಲ್ಲಾದರು ಇರು ಎಂತಾದರು ಇರು ಮೊದಲು ಕನ್ನಡವಾಗಿರು ಎಂದು ಮಾತು ಆರಂಭಿಸಿದ ಮೋದಿ, ಭಾಷಣದುದ್ದಕ್ಕೂ ಕನ್ನಡ ನಾಡು-ನುಡಿ ಹಾಗೂ ರಾಜ್ಯದ ಮಹನೀಯರನ್ನು ನೆನೆದರು. ಭಾಷಣದಲ್ಲಿ ಮೋದಿ ಅಲ್ಲಲ್ಲಿ ಕನ್ನಡ ಪದಗಳನ್ನು ಬಳಸಿ ಸಿಳ್ಳೆ ಚೆಪ್ಪಾಳೆ ಗಿಟ್ಟಿಸಿಕೊಂಡರು.
ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಓಬವ್ವ, ಕುವೆಂಪು ರಚಿತ ಶ್ರೀರಾಮಾಯಣ ದರ್ಶನಂ, ಕರ್ನಾಟಕದ ಕಂಸಾಳೆ, ಯಕ್ಷಗಾನ, ಬಸವಣ್ಣನವರ ವಚನಗಳು ಹಾಗೂ 12ನೇ ಶತಮಾನದ ಅವರ ಅನುಭವ ಮಂಟಪ ಬಗ್ಗೆ ಮೋದಿ ಪ್ರಸ್ತಾಪ ಮಾಡಿ, ಲಂಡನ್ ಥೇಮ್ಸ್ ನದಿ ದಡದಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣಗೊಳಿಸಿದ್ದು ನನ್ನ ಸೌಭಾಗ್ಯ ಎಂದರು.
ಕರ್ನಾಟಕ ರಾಜ್ಯ ಐತಿಹಾಸಿಕ ಚರಿತ್ರೆ ಹೊಂದಿದೆ. ಕರ್ನಾಟಕವನ್ನು ಬಿಟ್ಟು ಭಾರತ ಊಹಿಸಿಕೊಳ್ಳಲು ಸಾಧ್ಯವಿಲ್ಲ. ದೇಶ ಕಟ್ಟವಲ್ಲಿ ಕನ್ನಡಿಗರ ಕೊಡುಗೆ ಅಪಾರವಾದದ್ದು. ಕನ್ನಡಿಗರು ಏಕ್ ಭಾರತ್ ಶ್ರೇಷ್ಠ ಭಾರತ ಮಂತ್ರ ಗೆದ್ದವರು. ರಾಷ್ಟ್ರಕವಿ ಕುವೆಂಪು ಅವರ 'ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ' ಎಂಬ ನಾಡಗೀತೆ ಎಂತಹ ಅದ್ಭುತ. ಈ ಗೀತೆ ಇಡೀ ಭಾರತ ಹಾಗೂ ಕರ್ನಾಟಕ ವಿವರಣೆ ಒಳಗೊಂಡಿದೆ ಎಂದು ಬಣ್ಣಿಸಿದರು.
ಕರ್ನಾಟಕದ ಅಭಿವೃದ್ಧಿ ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ಒಂದು ಕಾಲದಲ್ಲಿ ಇಲ್ಲಿನ ಹಣವನ್ನು ವಿದೇಶದಲ್ಲಿ ಹೂಡಿಕೆ ಮಾಡಲಾಗುತ್ತಿತ್ತು. ಆದ್ರೆ ಈಗ ಬೆಂಗಳೂರಲ್ಲಿ ವಿದೇಶ ಹಣ ಹೂಡಿಕೆಯಾಗುತ್ತಿದೆ. ಕರ್ನಾಟದಲ್ಲಿ ರೈಲ್ವೆ ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಸರ್ಕಾರ ಕೇವಲ 4 ಸಾವಿರ ಕೋಟಿ ನೀಡಿತ್ತು. ಆದ್ರೆ ನಮ್ಮ ಸರ್ಕಾರ ಈ ಕಳೆದ ಬಜೆಟ್ನಲ್ಲಿ 7 ಸಾವಿರ ಕೋಟಿ ರೂ ಅನುದಾನ ನೀಡಿದೆ. ರಾಜ್ಯದ ಹೆದ್ದಾರಿ ನಿರ್ಮಾಣಕ್ಕಾಗಿ ಐದು ವರ್ಷದಲ್ಲಿ 6 ಸಾವಿರ ಕೋಟಿ ಹಣವನ್ನು ಈ ಮೊದಲಿನ ಸರ್ಕಾರ ಮಂಜೂರು ಮಾಡಿತ್ತು. ಆದ್ರೆ ನಮ್ಮ ಸರ್ಕಾರ ಕಳೆದ 9 ವರ್ಷದಿಂದ ಪ್ರತಿ ವರ್ಷ ಕರ್ನಾಟಕ ಹೆದ್ದಾರಿ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ಹಣ ಕೊಡುತ್ತಿದ್ದೇವೆ. ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆ ಆರಂಭಿಸಿದ್ದು, ಇದರಿಂದ ಆ ಭಾಗದ ರೈತರ ಕಲ್ಯಾಣವಾಗಲಿದೆ. ರಾಜ್ಯದ ಅಭಿವೃದ್ಧಿಗೆ ಈ ಮೊದಲಿನ ಯುಪಿಎ ಸರ್ಕಾರ 2009-14ರ ಅವಧಿಯಲ್ಲಿ 11 ಸಾವಿರ ಕೋಟಿ ರೂ ನೀಡಿತ್ತು. ಆದ್ರೆ ನಮ್ಮ ಸರ್ಕಾರವು 30 ಸಾವಿರ ಕೋಟಿ ನೀಡಿದೆ ಎಂದು ತಿಳಿಸಿದರು.
ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಸಂಕಲ್ಪ ಯಶಸ್ವಿ: ಮುಖ್ಯಮಂತ್ರಿ
ಪರಮಪೂಜ್ಯರ ಆಶೀರ್ವಾದದೊಂದಿಗೆ ಕರ್ನಾಟಕವನ್ನು ಮುನ್ನಡೆಸುವ ಸಂಕಲ್ಪದಿಂದ ಮುನ್ನೆಡೆಯುತ್ತಿದ್ದೇನೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಸಂಕಲ್ಪ ಯಶಸ್ವಿಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನನಗೆ ದಿಲ್ಲಿಯಲ್ಲಿ ಕನ್ನಡದ ಕಂಪು ಬಹಳ ಅದ್ಭುತವಾಗಿ ಕಾಣಿಸುತ್ತಿದೆ. ಸಾಂಸ್ಕೃತಿಕ, ಆಧ್ಯಾತ್ಮಿಕ, ನೀತಿ ಶ್ರೀಮಂತಿಕೆ ಹಾಗೂ ಜ್ಞಾನ, ತಂತ್ರಜ್ಞಾನದಿಂದ ನಮ್ಮ ಕನ್ನಡ ನಾಡು ಕೂಡಿದೆ. ಕನ್ನಡ ನಾಡಿನಲ್ಲಿ ಹುಟ್ಟಿರುವಂತಹ ದಾರ್ಶನಿಕರು ವಿಶ್ವಮಾನ್ಯರು. ನವ ಕನ್ನಡ ನಾಡು ನಿರ್ಮಾಣಕ್ಕೆ ಶ್ರಮಿಸಿದ ಮೈಸೂರು ಮಹಾರಾಜರಿಂದ ಹಿಡಿದು, ವಿಶ್ವೇಶ್ವರಯ್ಯ ಅವರನ್ನೊಳಗೊಂಡ ಎಲ್ಲ ಕಾಯಕ ಯೋಗಿ ಇಂಜಿನಿಯರ್ಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ನಿಸರ್ಗ ನಮಗೆ ಬಹಳ ಶ್ರೀಮಂತಿಕೆಯನ್ನು ಕೊಟ್ಟಿದೆ. ಪಶ್ಚಿಮ ಘಟ್ಟದಿಂದ ಹರಿಯುವ ನದಿಗಳು ಇವತ್ತು ಕನ್ನಡ ನಾಡನ್ನು ಕೃಷಿಯಲ್ಲಿ, ಸಂಸ್ಕೃತಿಯಲ್ಲಿ ಶ್ರೀಮಂತ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಐದು ಟ್ರಿಲಿಯನ್ ಡಾಲರ್ ಕನಸಿಗೆ, ಕರ್ನಾಟಕ ಬರುವ ವರ್ಷದಲ್ಲಿ ಒಂದು ಟ್ರಿಲಿಯನ್ ಡಾಲರ್ ಕೊಡುಗೆ ನೀಡಲಿದೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಕನ್ನಡದ ಈ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಮೊದಲನೇ ಮುಖ್ಯಮಂತ್ರಿ ಕೆ.ಸಿ ರೆಡ್ಡಿಯವರನ್ನು ಸಿಎಂ ಬೊಮ್ಮಾಯಿ ನೆನಪಿಸಿಕೊಂಡರು. ಇದೇ ವೇಳೆ ಮುಂದಿನ ವರ್ಷ ದಾವಣಗೆರೆಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಗಮಿಸುವಂತೆ ಪ್ರಧಾನಿ ಮೋದಿ ಅವರಿಗೆ ಸಿಎಂ ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಡಾ. ನಿರ್ಮಲಾನಂದ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸುತ್ತೂರು ಮಠ, ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ವಿಶ್ವೇಶ್ವರ ಪ್ರಸನ್ನ ತೀರ್ಥ ಸ್ವಾಮೀಜಿ, ಡಾ. ವಿರೇಂದ್ರ ಹೆಗೆಡೆ, ನಂಜಾವದೂತ ಮಹಾಸ್ವಾಮೀಜಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯದ ಸಚಿವರಾದ ಸುನೀಲ್ ಕುಮಾರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.