ಹೂಗ್ಲಿ( ಪಶ್ಚಿಮ ಬಂಗಾಳ): ಅಸ್ಸೋಂ ಬಳಿಕ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಂಗಾಳ ಪರಿವರ್ತನೆಗಾಗಿ ಹಾತೊರೆಯುತ್ತಿದೆ ಎಂದಿದ್ದಾರೆ.
ಕೆಲವೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಹೊಗ್ಲಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಪಶ್ಚಿಮ ಬಂಗಾಳದಲ್ಲಿ ಮೆಟ್ರೋ ಮತ್ತು ರೈಲು ಸಂಪರ್ಕ ಸುಧಾರಣೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಇದರಿಂದ ಅನೇಕ ಜನರಿಗೆ ಕೆಲಸ ಸಿಗಲಿದೆ ಎಂದರು. ಬಂಗಾಳದ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಸತತವಾಗಿ ಶ್ರಮಿಸಲಿದೆ ಎಂದಿರುವ ನಮೋ, ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದರು.
ಓದಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಂಐಎಂ ಸ್ಪರ್ಧೆ: ಅಭ್ಯರ್ಥಿ ಘೋಷಿಸಿದ ಓವೈಸಿ
ಪಿಎಂ ಕಿಸಾನ್ ಸಮ್ಮಾನ್ ಯೋಜನೆಗಾಗಿ ಕೇಂದ್ರ ಸರ್ಕಾರ ನೇರವಾಗಿ ಹಣ ರಿಲೀಸ್ ಮಾಡ್ತಿದೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಇದರಲ್ಲೂ ಹಸ್ತಕ್ಷೇಪ ಮಾಡಿ ಅವರ ಅಕೌಂಟ್ಗಳಿಗೆ ಹಣ ಹೋಗದಂತೆ ನೋಡಿಕೊಳ್ಳುತ್ತಿದ್ದು, ಟಿಎಂಸಿ ಮುಖಂಡರ ಜೇಬು ತುಂಬಿಸುತ್ತಿದ್ದು, ಬಡವರು ಬಡವರಾಗಿ ಉಳಿದುಕೊಳ್ಳುವಂತೆ ಮಾಡಿದೆ ಎಂದರು. ಬಂಗಾಳದಲ್ಲಿ 1.75 ಕೋಟಿ ಮನೆಗಳ ಪೈಕಿ ಕೇವಲ 90 ಲಕ್ಷ ಮನೆಗಳಿಗೆ ಪೈಪ್ಲೈನ್ ಸೌಲಭ್ಯವಿದೆ. ಹೀಗಾದ್ರೆ ಪಶ್ಚಿಮ ಬಂಗಾಳದ ಜನರು ಕುಡಿಯುವ ನೀರು ಪಡೆದುಕೊಳ್ಳುವುದು ಯಾವಾಗ? ಬಂಗಾಳ ಕೀ ಬೇಟಿಗೆ ಇದರ ಬಗ್ಗೆ ಗೊತ್ತಿಲ್ಲವೇ ಎಂದು ಮಮತಾ ವಿರುದ್ಧ ಹರಿಹಾಯ್ದರು.
ನಾವು ಹಣ ನೀಡಿದ್ರೂ ಇಲ್ಲಿನ ಸರ್ಕಾರ ಯೋಜನೆ ಜಾರಿಗೆ ತರುತ್ತಿಲ್ಲ. ಇಲ್ಲಿನ ಸರ್ಕಾರ ಕೆಲಸ ಮಾಡುತ್ತಿರುವ ಪರಿ ಇದು. ಬಂಗಾಳದ ಜನರಿಗೆ ಇಲ್ಲಿಯವರೆಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎಂದರು. 1,700 ಕೋಟಿಗೂ ಅಧಿಕ ಹಣ ಕೇಂದ್ರ ಸರ್ಕಾರ ಬಂಗಾಳಗೆ ನೀಡಿದೆ ಎಂದರು.
ವಂದೇ ಮಾತರಂ ಘೋಷಣೆ ಕೊಟ್ಟಿರುವ ನೆಲ ಇದು. ಗುಲಾಮಿ ಮನಸ್ಥಿತಿಯಿಂದ ಹೊರಬರಲು ನೇರವಾದ ಘೋಷಣೆ ಅದು. ಬಂಗಾಳದಲ್ಲಿ ಸರ್ಕಾರ ನಡೆಸಿರುವ ಸರ್ಕಾರಗಳು ಸರಿಯಾಗಿ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಆದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ಅಭಿವೃದ್ಧಿಪರ ಕಾರ್ಯಗಳು ನಡೆಯಲಿದೆ ಎಂದು ನಾನು ಇಲ್ಲಿನ ಜನರಿಗೆ ಭರವಸೆ ನೀಡುತ್ತೇನೆ ಎಂದರು. ಆಯುಷ್ಮಾನ್ ಭಾರತ್, ಜಲ್ ಜೀವನ್ ಮಿಷನ್ ಪಶ್ಚಿಮ ಬಂಗಾಳದಲ್ಲಿ ಸರಿಯಾಗಿ ಜಾರಿಗೊಳ್ಳುತ್ತಿಲ್ಲ. ಇದಕ್ಕೆ ಇಲ್ಲಿನ ಸರ್ಕಾರದ ನಿರಾಸಕ್ತಿಯನ್ನ ಎಂದು ತೊರಿಸುತ್ತದೆ ಎಂದು ನಮೋ ವಾಗ್ದಾಳಿ ನಡೆಸಿದರು.