ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲ ಮುಖ್ಯಮಂತ್ರಿಗಳ ಜತೆ ವರ್ಚುಯಲ್ ಸಭೆ ನಡೆಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾದ ಕೊರೊನಾ ವೈರಸ್ ರೂಪಾಂತರದಿಂದ ಉಂಟಾದ ಕೋವಿಡ್ -19 ಪ್ರಕರಣವು ದೆಹಲಿಯಲ್ಲಿ ಪತ್ತೆಯಾಗಿದೆ ಎಂದು ಪಿಟಿಐ ಮೂಲಗಳು ತಿಳಿಸಿವೆ.
ದೇಶದ 70 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಶೇ 150ಕ್ಕಿಂತ ಅತ್ಯಧಿಕವಾಗಿದೆ ಎಂದು ಹೇಳಲಾಗಿದೆ. ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾದ ಮಹಾರಾಷ್ಟ್ರದಲ್ಲಿ ಶೇ 60ರಷ್ಟು ಸಕ್ರಿಯ ವೈರಸ್ ಪ್ರಕರಣಗಳಿವೆ. ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು, ರಾಜ್ಯಾದ್ಯಂತ ಆರ್‌ಟಿಪಿಸಿಆರ್ ಪರೀಕ್ಷೆ ಹೆಚ್ಚಿಸಲು ಪ್ರಸ್ತಾಪಿಸಲಾಯಿತು.
ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳು ಕೋವಿಡ್ ದೈನಂದಿನ ಹೊಸ ಪ್ರಕರಣಗಳ ಹೆಚ್ಚಳದ ವರದಿ ಮಾಡುತ್ತಿವೆ. ಹೀಗಾಗಿ, ಈ ಸಭೆ ನಿರ್ಧಾರಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ.
ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಜೋಡಣೆಯ 'ಜೀಪ್ ರಾಂಗ್ಲರ್' ಲಾಂಚ್: ಫೀಚರ್, ದರ ಹೀಗಿದೆ!
ಕೋವಿಡ್-19 ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ನಡೆಯುತ್ತಿರುವ ನಿರ್ಣಾಯಕ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗವಹಿಸುತ್ತಿದ್ದಾರೆ.
ಭಾರತವು ಬುಧವಾರ 2021ರಲ್ಲಿ ಕೊರೊನಾ ವೈರಸ್ ಸೋಂಕಿನಲ್ಲಿ ಅತಿ ಹೆಚ್ಚು ದೈನಂದಿನ ಏರಿಕೆ ದಾಖಲಿಸಿದೆ. ಈ ವರ್ಷ ಅತಿ ಹೆಚ್ಚು ಕೋವಿಡ್ ಸಂಬಂಧಿತ ಸಾವುಗಳು ಕೂಡ ವರದಿಯಾಗಿದೆ. ಒಟ್ಟಾರೆಯಾಗಿ 28,903 ಜನರಿಗೆ ಮಾರಣಾಂತಿಕ ಸಾಂಕ್ರಾಮಿಕ ವೈರಸ್ ಸೋಂಕು ತಗುಲಿದ್ದು, ಕಳೆದ 24 ಗಂಟೆಗಳಲ್ಲಿ 188 ಜನರು ಈ ಕಾಯಿಲೆಗೆ ಬಲಿಯಾಗಿದ್ದಾರೆ.