ಟ್ವಿಟರ್, ಇನ್ಸ್ಟಾಗ್ರಾಮ್ನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಜನಪ್ರಿಯ ಸಾಮಾಜಿಕ ಮಾಧ್ಯಮ ಸಂಸ್ಥೆ ವಾಟ್ಸ್ಆ್ಯಪ್ ಹೊಸದಾಗಿ ಪರಿಚಯಿಸಿರುವ 'ಚಾನಲ್'ಗೆ ಎಂಟ್ರಿ ಕೊಟ್ಟಿದ್ದಾರೆ. ವಾಟ್ಸಾಪ್ ಬಳಕೆದಾರರು ಕೂಡ ಈಗ ಮೋದಿ ಅವರ ಕುರಿತ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.
ವಾಟ್ಸ್ ಆ್ಯಪ್ ಚಾನಲ್ಗೆ ಸೇರ್ಪಡೆಯಾದ ಬಳಿಕ ಮೊದಲ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ವಾಟ್ಸಾಪ್ ಗ್ರೂಪ್ ಸೇರಲು ನನಗೆ ಸಂತೋಷವಾಗಿದೆ. ನಿಮ್ಮನ್ನು ಭೇಟಿಯಾಗಲು ನಾನು ಇನ್ನಷ್ಟು ಹತ್ತಿರವಾಗುತ್ತಿದ್ದೇನೆ ಎಂದು ಹೊಸ ಸಂಸತ್ತಿನ ತಮ್ಮ ಕಚೇರಿಯಲ್ಲಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಾಟ್ಸಾಪ್ ಚಾನಲ್ ಸೇರಿದ್ದರು.
ಟ್ವಿಟರ್‌ನಲ್ಲಿ ಮೋದಿ ಟಾಪ್: ದೇಶದಲ್ಲೇ ಅತಿ ಹೆಚ್ಚು ಸಾಮಾಜಿಕ ಜಾಲತಾಣಗಳ ಫಾಲೋವರ್ಸ್ ಹೊಂದಿರುವ ವ್ಯಕ್ತಿಯಾಗಿ ಪ್ರಧಾನಿ ನರೇಂದ್ರ ಮೋದಿ ಮುಂದುವರಿದಿದ್ದಾರೆ. ಜನಪ್ರಿಯ ಸಾಮಾಜಿಕ ಮಾಧ್ಯಮವಾದ ಎಕ್ಸ್ (ಟ್ವಿಟರ್) ನಲ್ಲಿ ಹೆಚ್ಚು ಅನುಯಾಯಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊದಲೆರಡು ಸ್ಥಾನಗಳಲ್ಲಿ ಇದ್ದಾರೆ. ಮೋದಿ ಅವರ ಟ್ವಿಟ್ಟರ್ ಫಾಲೋವರ್ಸ್ 91.5 ಮಿಲಿಯನ್ (9 ಕೋಟಿ 15 ಲಕ್ಷ) ಇದ್ದರೆ, ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಅಧಿಕೃತ ಟ್ವಿಟರ್ ಖಾತೆಯನ್ನು 54 ಮಿಲಿಯನ್ (5.4 ಕೋಟಿ) ಜನರು ಅನುಸರಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಟ್ವಿಟರ್ ಖಾತೆಗೆ 33.7 ಮಿಲಿಯನ್ (3.37 ಕೋಟಿ) ಹಿಂಬಾಲಕರು ಇದ್ದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅನುಯಾಯಿಗಳ ಸಂಖ್ಯೆ ಇತ್ತೀಚೆಗೆ 26 ಮಿಲಿಯನ್ (2.6 ಕೋಟಿ) ದಾಟಿದೆ.
ಏನಿದು ವಾಟ್ಸಾಪ್ ಚಾನಲ್?: ಟೆಲಿಗ್ರಾಂ ಮಾದರಿಯಲ್ಲಿ ವಾಟ್ಸ್ಆ್ಯಪ್ 'ಚಾನಲ್ಸ್' ಆರಂಭಿಸಿದೆ. ಪ್ರಸ್ತುತ ನಾವು WhatsApp ಅನ್ನು ಪರಸ್ಪರ ಸಂವಹನಕ್ಕಾಗಿ ಮಾತ್ರ ಬಳಸುತ್ತೇವೆ. ಕಾಲಾನಂತರದಲ್ಲಿ ಇದರಲ್ಲಿ ಗ್ರೂಪ್ಸ್ ಫೀಚರ್ ಬಂದಿತು. ಇತ್ತೀಚೆಗೆ, ಹೊಸದಾಗಿ ಚಾನಲ್‌ಗಳನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರು, ಅವರ ನೆಚ್ಚಿನ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಟ್ವಿಟರ್, ಇನ್ಸ್ಟಾಗ್ರಾಮ್ ಮಾದರಿಯಲ್ಲಿ ಒಬ್ಬರನ್ನೊಬ್ಬರು ಅನುಸರಿಸಬಹುದು. Twitter ಮತ್ತು Instagram ನಲ್ಲಿ ಇರುವಂತೆ ಲೈಕ್, ಕಮೆಂಟ್ ಕೂಡ ಮಾಡಬಹುದು. ಇದಕ್ಕೆ ಫೋನ್ ಸಂಖ್ಯೆ ಕೂಡ ಬೇಕಾಗಿಲ್ಲ.
ವಾಟ್ಸಾಪ್ ಹೊರತಂದಿರುವ ಚಾನಲ್‌ಗಳ ಸೌಲಭ್ಯವನ್ನು ಭಾರತದಲ್ಲೂ ಲಭ್ಯವಿದೆ. ಒಟ್ಟಾರೆ, 150 ದೇಶಗಳಲ್ಲಿ ಈ ವೈಶಿಷ್ಟ್ಯವನ್ನು ಪ್ರಾರಂಭಿಸಲಾಗಿದೆ ಎಂದು ಫೇಸ್ಬುಕ್, ವಾಟ್ಸ್ಆ್ಯಪ್ಮ ಮಾತೃಸಂಸ್ಥೆಯಾದ ಮೆಟಾ ತಿಳಿಸಿದೆ.
ಇದನ್ನೂ ಓದಿ: ಏಟಿಗೆ ಇದಿರೇಟು! ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಛಾಟಿಸಿದ ಭಾರತ