ಶಾಮ್ಲಿ(ಉತ್ತರಪ್ರದೇಶ): ಹತ್ತನೇ ತರಗತಿಯ ಸಿಬಿಎಸ್ಇ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ರಾಜ್ಯದ ಶಾಮ್ಲಿಯ ಬಾಲಕಿ ದಿಯಾ ನಾಮದೇವ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ.
ದಿಯಾ ಆಕೆಯ ತಂದೆಯೊಂದಿಗೆ ಪ್ರಧಾನಿ ಅವರನ್ನು ನವದೆಹಲಿಯಲ್ಲಿರುವ ಅವರ ನಿವಾಸದಲ್ಲೇ ಭೇಟಿಯಾಗಿದ್ದಾರೆ. ಪರೀಕ್ಷೆಯಲ್ಲಿ ಶೇ.100 ರಷ್ಟು ಅಂಕಗಳನ್ನು ಗಳಿಸಿರುವ ದಿಯಾಳನ್ನು ಮೋದಿಯವರು ಕೊಂಡಾಡಿದ್ದಾರೆ. ಅಲ್ಲದೇ ಆಕೆಗೆ ಶುಭ ಹಾರೈಸಿದ್ದಾರೆ. ಬಳಿಕ ಅನೇಕ ರಾಜಕೀಯ ನಾಯಕರುಗಳನ್ನು ತಂದೆ ಮಗಳು ಭೇಟಿಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಿಯಾ ತಂದೆ ರಾಜೀವ್ ಗಾರ್ಗ್, ಪ್ರಧಾನಿಯವರನ್ನು ಶಾಲು ಹೊದಿಸಿ ಗೌರವಿಸುವ ಅವಕಾಶ ನನಗೆ ಸಿಕ್ಕಿದೆ. ಇದೆಲ್ಲವೂ ನನ್ನ ಮಗಳು ದಿಯಾಳಿಂದಲೇ ನನಗೆ ದೊರೆತಿರುವುದು. ಪ್ರಧಾನಿ ಅವರು ಸ್ವತಃ ತಮ್ಮ ಕುರ್ಚಿಯಿಂದ ಎದ್ದು ಬಂದು ಮಗಳ ಭವಿಷ್ಯದ ಸಾಧನೆಗೆ ತುಂಬಾ ಪ್ರೀತಿಯಿಂದ ಪ್ರೋತ್ಸಾಹಿಸಿದ್ದಾರೆ. ಇದೆಲ್ಲವೂ ನನಗೆ ಕನಸಿನಂತೆ ಭಾಸವಾಗುತ್ತಿದೆ ಎಂದು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಇಂಜಿನಿಯರ್ ಆಗುವ ಗುರಿಯನ್ನು ಹೊಂದಿರುವ ದಿಯಾ, ಪ್ರಧಾನಿಯವರ 'ಮೇಕ್ ಇನ್ ಇಂಡಿಯಾ' ಯೋಜನೆಯು ಯುವಜನತೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪದವಿ ಪರೀಕ್ಷೆಗಳಲ್ಲಿ ಬಿಎಲ್ಡಿಇ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಉತ್ತಮ ಸಾಧನೆ