ನವದೆಹಲಿ: ಕೆಲ ದಿನಗಳ ಹಿಂದೆ ಹತ್ಯೆಗೀಡಾದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಪಾನ್ಗೆ ಪ್ರಯಾಣ ಬೆಳೆಸಿದರು.
ನಾಳೆ(ಮಂಗಳವಾರ) ಜಪಾನ್ ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆ ನಡೆಯಲಿದೆ. ಕೆಲ ದಿನಗಳ ಹಿಂದೆ ಶಿಂಜೋ ಅಬೆ ಅವರು ಯುವಕನೊಬ್ಬನ ಗುಂಡಿನ ದಾಳಿಗೆ ಬಲಿಯಾಗಿದ್ದರು. ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಿದ್ದರು.
ಇದರಂತೆ ಮಂಗಳವಾರ ಶಿಂಜೋ ಅಬೆ ಅವರಿಗೆ ದೇಶ ಅಂತಿಮ ವಿದಾಯ ಹೇಳಲಿದೆ. ವಿಶ್ವದ 20 ಕ್ಕೂ ಹೆಚ್ಚು ದೇಶಗಳ ನಾಯಕರು ಅಬೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಅವರು ಕೂಡ ಜಪಾನ್ಗೆ ತೆರಳಿದರು.
ಜಪಾನ್ಗೆ ತೆರಳುವ ಮೊದಲು ಪ್ರಧಾನಿ ಮೋದಿ ಅವರು ಟೋಕಿಯೋ ಭೇಟಿ ಬಗ್ಗೆ ಮಾಹಿತಿ ನೀಡಿದ್ದರು. "ನಾಳೆ ನಡೆಯಲಿರುವ ಆತ್ಮೀಯ ಸ್ನೇಹಿತ ಮತ್ತು ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಪಾನ್ಗೆ ಭೇಟಿ ನೀಡಲಿದ್ದೇನೆ. ಎಲ್ಲ ಭಾರತೀಯರ ಪರವಾಗಿ ಸಂತಾಪ ಸೂಚಿಸಲಿದ್ದೇನೆ. ಭಾರತ - ಜಪಾನ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕೆಲಸ ಮುಂದುವರಿಸಲಾಗುವುದು" ಎಂದು ಟ್ವೀಟ್ ಮಾಡಿದ್ದರು.
ಶಿಂಜೋ ಅಬೆ ಅವರು ಜಪಾನ್ ಪ್ರಧಾನಿಯಾಗಿದ್ದ ವೇಳೆ ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದರು. ಅಲ್ಲದೇ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ನೆರವಾಗಿದ್ದರು. ಇದರಿಂದ ಅವರಿಗೆ 2021 ರ ಸಾಲಿನ ಪ್ರತಿಷ್ಠಿತ ಪದ್ಮವಿಭೂಷಣ ಗೌರವ ಪ್ರದಾನ ಮಾಡಲಾಗಿತ್ತು.
ಇನ್ನು ಜುಲೈ 8 ರಂದು ನಾರಾ ನಗರದಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ಶಿಂಜೋ ಅಬೆ ಅವರ ಮೇಲೆ ಯುವಕನೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಇದರಿಂದ ಭಾರತ ಸರ್ಕಾರ ಜುಲೈ 9 ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಿತ್ತು.
ಕೆಲ ದಿನಗಳ ಹಿಂದಷ್ಟೇ ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರ ಅಂತ್ಯಕ್ರಿಯೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂಗ್ಲೆಂಡ್ಗೆ ತೆರಳಿದ್ದರು. ಇಂಗ್ಲೆಂಡ್ ರಾಣಿಯ ಅಂತ್ಯಕ್ರಿಯೆ ಸರ್ಕಾರ 50 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಇದು ಇಂಗ್ಲೆಂಡ್ನಲ್ಲಿಯೆ ಅತ್ಯಂತ ದುಬಾರಿ ಅಂತ್ಯಕ್ರಿಯೆ ಕಾರ್ಯಕ್ರಮವಾಗಿತ್ತು. ಈಗ ಜಪಾನ್ ಸರ್ಕಾರ 90 ಕೋಟಿಗೂ ಅಧಿಕ ಹಣವನ್ನು ಶಿಂಜೋ ಅಬೆ ಅಂತ್ಯಕ್ರಿಯೆಗೆ ಖರ್ಚು ಮಾಡುತ್ತಿದ್ದು ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.