ನವದೆಹಲಿ: 36 ಹೊಸ ಮುಖಗಳು ಸೇರಿದಂತೆ ಪ್ರಧಾನಿ ಮೋದಿ ಅವರ ಸಚಿವ ಸಂಪುಟ ಸೇರಿರುವ 43 ಮಂದಿ ಸಚಿವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಅಶ್ವಿನಿ ವೈಷ್ಣವ್, ಮೀನಾಕ್ಷಿ ಲೇಖಿ, ಅನುರಾಗ್ ಠಾಕೂರ್, ರಾಜೀವ್ ಚಂದ್ರಶೇಖರ್, ಕಿರಣ್ ರಿಜಿಜು, ದರ್ಶನ್ ವಿಕ್ರಮ್ ಜರ್ದೋಷ್, ಮನ್ಸುಖ್ ಮಾಂಡೋವಿಯಾ, ಡಾ.ಭಾರತಿ ಪರ್ವಿನ್ ಹಾಗೂ ರಾಮಚಂದ್ರ ಪ್ರಸಾದ್ ಸಿಂಗ್ ಇಂದು ಬೆಳಗ್ಗೆಯೇ ಅಧಿಕಾರ ಸ್ವೀಕರಿಸಿದರು.
ಅಶ್ವಿನಿ ವೈಷ್ಣವ್: ಒಡಿಶಾದಿಂದ ರಾಜ್ಯಸಭೆ ಸದಸ್ಯರಾಗಿರುವ ಬಿಜೆಪಿಯ ಅಶ್ವಿನಿ ವೈಷ್ಣವ್, ರೈಲ್ವೆ ಸಂಪರ್ಕ ಹಾಗೂ ಐಟಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಉದ್ಯಮಿ ಹಾಗು ರಾಜಕಾರಣಿಯಾಗಿರುವ ವೈಷ್ಣವ್ ಅವರ ಮುಂದೆ ಖಾಸಗಿ ರೈಲುಗಳ ಕಾರ್ಯಾಚರಣೆಯ ದೊಡ್ಡ ಸವಾಲಿದೆ. 50 ವರ್ಷದ ವೈಷ್ಣವ್ 1994ರ ಬ್ಯಾಚ್‌ನ ಮಾಜಿ ಐಎಎಸ್ ಅಧಿಕಾರಿಯಾಗಿದ್ದು, ಪ್ರತಿಷ್ಠಿತ ವಾರ್ಟನ್ ಶಾಲೆ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಮತ್ತು ಐಐಟಿ ಕಾನ್ಪುರದಿಂದ ಎಂಟೆಕ್ ಪದವಿ ಪಡೆದಿದ್ದಾರೆ.
ಅನುರಾಗ್ ಠಾಕೂರ್: ಪ್ರಧಾನಿ ಮೋದಿ ಸರ್ಕಾರದ ಕ್ಯಾಬಿನೆಟ್ ಪುನರ್ರಚನೆಯಲ್ಲಿ ಉನ್ನತ ಸ್ಥಾನದಲ್ಲಿರುವ ಮತ್ತೊಬ್ಬ ಕ್ಯಾಬಿನೆಟ್ ಸಚಿವ ಅನುರಾಗ್ ಠಾಕೂರ್. ಇವರು ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಜೊತೆಗೆ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಖಾತೆಯ ಜವಾಬ್ದಾರಿ ಹೊತ್ತಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಜವಾಬ್ದಾರಿಯನ್ನು ಪ್ರಧಾನಿ ಮೋದಿ ನೀಡಿದ್ದು, ಅವರ ನಿರೀಕ್ಷೆಗಳನ್ನು ಈಡೇರಿಸಲು ನಾನು ಪ್ರಯತ್ನಿಸುತ್ತೇನೆ ಎಂದು ಠಾಕೂರ್ ಹೇಳಿದರು. ಈ ಮೊದಲು ಅವರು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರ ಪ್ರಮುಖ ಖಾತೆಯನ್ನು ಠಾಕೂರ್ ನಿರ್ವಹಿಸುತ್ತಿದ್ದರು. ಹಮೀರ್‌ಪುರ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿದ್ದು, ಬಿಸಿಸಿಐ ಮತ್ತು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮೀನಾಕ್ಷಿ ಲೇಖಿ: ಸಚಿವ ಸಂಪುಟದ ರಾಜ್ಯ ಸಚಿವರಾಗಿ 2ನೇ ಅವಧಿಗೆ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ ದೆಹಲಿ ಕ್ಷೇತ್ರದ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ, ವಿದೇಶಾಂಗ ವ್ಯವಹಾರ ಮತ್ತು ಸಚಿವಾಲಯದ ಸಂಸ್ಕೃತಿ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿ, ಗೃಹ ಸಚಿವರು ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಇಡೀ ತಂಡಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ. ಮಹಿಳೆಯರಿಗೆ ದೊಡ್ಡ ಜವಾಬ್ದಾರಿಗಳನ್ನು ನೀಡಲಾಗಿದೆ. ಜನರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಪ್ರಧಾನಿ ಅವರಿಂದ ದೇಶವನ್ನು ಸಶಕ್ತ ಮಹಿಳೆಯರ ನೇತೃತ್ವದಲ್ಲಿ ನಡೆಸಲು ಸಾಧ್ಯವಾಯಿತು. ಇದು ಪ್ರಶಂಸನೀಯವಾಗಿದೆ ಎಂದು ಮೀನಾಕ್ಷಿ ಲೇಖಿ ಹೇಳಿದರು. ಮೀನಾಕ್ಷಿ ಲೇಖಿ, ತನ್ನ ಟೆಲಿವಿಷನ್ ಚರ್ಚೆಗಳು ಮತ್ತು ಸಂಸತ್ತಿನಲ್ಲಿ ಚೆನ್ನಾಗಿ ಮಾತನಾಡಬಲ್ಲರು. ಸಾರ್ವಜನಿಕ ಕಾರ್ಯಗಳ ಸಂಸದೀಯ ಸಮಿತಿಯ ಅಧ್ಯಕ್ಷರಾಗಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ.
ಇದನ್ನೂ ಓದಿ: ರೈತನ ಮಗಳಾಗಿ ಸಮಸ್ಯೆಗಳ ಬಗ್ಗೆ ಅರಿವಿದೆ, ಅವರ ಕಲ್ಯಾಣಕ್ಕೋಸ್ಕರ ಕೆಲಸ ಮಾಡುವೆ: ಕೇಂದ್ರ ಸಚಿವೆ ಶೋಭಾ
ಮನ್ಸುಖ್ ಮಾಂಡೋವಿಯಾ: ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಸದಸ್ಯರಾದ ಮಾಂಡೋವಿಯಾ, ಇಂದು ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಸಚಿವ ಸಂಪುಟದಿಂದ ಕೈಬಿಡಲಾಗಿದ್ದ ಡಾ.ಹರ್ಷವರ್ಧನ್ ಅವರ ಸ್ಥಾನವನ್ನು ಮಾಂಡವಿಯಾ ತುಂಬಲಿದ್ದಾರೆ. ದೇಶವು ಮಹಾಮಾರಿ ಕೋವಿಡ್ ವಿರುದ್ಧ ಹೋರಾಡುತ್ತಿದ್ದು, ಇದನ್ನು ಹೇಗೆ ಮನ್ಸಖ್ ಅವರು ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಖಾತೆಯನ್ನು ನೀಡಲಾಗಿದೆ. ಈ ಮೊದಲು ಬಂದರು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಚಿಂತನಶೀಲ ಮತ್ತು ವಾಗ್ಮಿಯಾಗಿದ್ದು, ಗುಜರಾತ್‌ನ ಅತ್ಯಂತ ಕಿರಿಯ ಶಾಸಕ ಎಂಬ ದಾಖಲೆಯನ್ನೂ ಹೊಂದಿದ್ದಾರೆ.
ಕಿರಣ್ ರಿಜಿಜು: ಅರುಣಾಚಲ ಪ್ರದೇಶದಿಂದ ಸಂಸದರಾಗಿರುವ ರಿಜಿಜು ಕಾನೂನು ಮತ್ತು ನ್ಯಾಯ ಸಚಿವರಾಗಿ ಇಂದು ಅಧಿಕಾರ ವಹಿಸಿಕೊಂಡರು. ಕಾನೂನು ಮತ್ತು ನ್ಯಾಯಕ್ಕೆ ವರ್ಗಾವಣೆಯಾಗುತ್ತಿದ್ದೇನೆ. ಆದರೆ ಸೇವೆಯಲ್ಲಿನ ನನ್ನ ಪ್ರಯತ್ನಗಳು ಮುಂದುವರಿಯಲಿವೆ. ಕಾನೂನು ಮತ್ತು ನ್ಯಾಯ ಸಚಿವರಾಗಿ ಕಾರ್ಯನಿರ್ವಹಿಸುವುದು ನನಗೆ ದೊಡ್ಡ ಜವಾಬ್ದಾರಿಯಾಗಿದೆ. ಸಾರ್ವಜನಿಕರ ನಿರೀಕ್ಷೆಗಳನ್ನು ಈಡೇರಿಸುವುದು ನನ್ನ ಆದ್ಯತೆಯಾಗಿದೆ. ನಾವು ಯಾವಾಗಲೂ ಪಾರದರ್ಶಕವಾಗಿರಲು ಪ್ರಯತ್ನಿಸುತ್ತೇವೆ. ಕ್ರೀಡಾ ಇಲಾಖೆಯಲ್ಲಿನ ಸೇವೆ ಸ್ಮರಣೀಯವಾಗಿತ್ತು ಎಂದಿದ್ದಾರೆ. ಕಿರಣ್ ರಿಜಿಜು ಅವರು ಈ ಹಿಂದೆ ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು. 2014-19ರವರೆಗೆ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು.