ನವದೆಹಲಿ: ತಮ್ಮ ಮಾಸಿಕ ರೆಡಿಯೋ ಕಾರ್ಯಕ್ರಮವಾದ 77ನೇ ಆವೃತ್ತಿಯ 'ಮನ್ ಕಿ ಬಾತ್'ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಹಾಗೂ ಚಂಡಮಾರುತದ ಸಂದರ್ಭ ಹೋರಾಡಿದವರನ್ನು ಶ್ಲಾಘಿಸಿದ್ದಾರೆ.
ಪ್ರಾಣವಾಯು ಪೂರೈಕೆಗೆ ಹರಸಾಹಸ
"ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ತುಂಬಾ ದೂರದ ಪ್ರದೇಶಗಳಿಗೆ ವೈದ್ಯಕೀಯ ಆಮ್ಲಜನಕವನ್ನು ಪೂರೈಸುವುದೇ ಒಂದು ಪ್ರಮುಖ ಸವಾಲಾಗಿತ್ತು. ಇಂತಹ ಸಂದರ್ಭದಲ್ಲಿ ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕರ್‌ಗಳ ಚಾಲಕರು ಲಕ್ಷಾಂತರ ಜನರ ಜೀವಗಳನ್ನು ಉಳಿಸಲು ಸಹಕರಿಸಿದ್ದಾರೆ" ಎಂದು ಮೋದಿ ತಿಳಿಸಿದರು.
ರಕ್ಷಣಾ ತಂಡಗಳಿಗೆ ವಂದನೆ
"ನಮ್ಮ ರಾಷ್ಟ್ರವು ಕೊರೊನಾ ವಿರುದ್ಧದ ಯುದ್ಧವನ್ನು ಸಂಪೂರ್ಣ ಬಲದಿಂದ ಹೋರಾಡುತ್ತಿರುವ ವೇಳೆ ನೈಸರ್ಗಿಕ ವಿಪತ್ತುಗಳಿಗೂ ಸಾಕ್ಷಿಯಾಯಿತು. ಕಳೆದ 10 ದಿನಗಳಲ್ಲಿ ದೇಶದ ಪಶ್ಚಿಮ ಮತ್ತು ಪೂರ್ವ ಕರಾವಳಿಗಳು ಎರಡು ದೊಡ್ಡ ಚಂಡಮಾರುತಗಳನ್ನು ಎದುರಿಸಿವೆ. ತೌಕ್ತೆ ಸೈಕ್ಲೋನ್ ಪಶ್ಚಿಮ ಕರಾವಳಿ ಹಾಗೂ ಯಾಸ್ ಚಂಡಮಾರುತವು ಪೂರ್ವ ಕರಾವಳಿಯನ್ನು ಅಪ್ಪಳಿಸಿತು. ಇಲ್ಲಿನ ಸರ್ಕಾರಗಳು ಹಾಗೂ ಜನರು ಧೈರ್ಯದಿಂದ ತಾಳ್ಮೆ ಮತ್ತು ಶಿಸ್ತಿನೊಂದಿಗೆ ಹೋರಾಡಿದ್ದಾರೆ. ಅವರ ಪ್ರಯತ್ನಗಳಿಗೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ" ಎಂದ ಪ್ರಧಾನಿ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ ವಂದಿಸಿದರು.
ಚಂಡಮಾರುತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಇದೇ ವೇಳೆ ಪಿಎಂ ಮೋದಿ ಸಾಂತ್ವನ ತಿಳಿಸಿ, ಸಂತ್ರಸ್ತರೊಂದಿಗೆ ಸ್ಥಿರವಾಗಿ ನಿಲ್ಲುವುದಾಗಿ ಭರವಸೆ ನೀಡಿದರು.