ಪೂರ್ವ ಬರ್ಧಮಾನ್ (ಪಶ್ಚಿಮ ಬಂಗಾಳ): ವಿಧಾನಸಭಾ ಚುನಾವಣೆಯ ಐದನೇ ಹಂತದ ಮತದಾನಕ್ಕೆ ಪಶ್ಚಿಮ ಬಂಗಾಳ ಸಜ್ಜಾಗುತ್ತಿದ್ದು, ಇಂದು ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
'ಮಾ ಮಾತಿ ಮಾನುಷ್' ಎನ್ನುತ್ತಾ ದೀದಿ 10 ವರ್ಷಗಳ ಕಾಲ ಬಂಗಾಳವನ್ನ ಆಳಿದರು. ಆದರೆ ಈಗ 'ಮೋದಿ ಮೋದಿ ಮೋದಿ' ಎಂದು ಜಪಿಸುತ್ತಿದ್ದಾರೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪಿಎಂ ಮೋದಿ ಟಾಂಗ್ ನೀಡಿದರು.
ಮಾ ಮಾತಿ ಮಾನುಷ್ (ತಾಯಿ, ಮಾತೃಭೂಮಿ, ಜನತೆ) ಎಂಬುದು ತೃಣಮೂಲ ಕಾಂಗ್ರೆಸ್ನ ಘೋಷವಾಕ್ಯವಾಗಿದ್ದು, ಇದನ್ನು ಟಿಎಂಸಿ ಮುಖ್ಯಸ್ಥೆ, ಸಿಎಂ ಮಮತಾ ಬ್ಯಾನರ್ಜಿ ಹುಟ್ಟುಹಾಕಿದ್ದರು.
ಟಿಎಂಸಿ ಕ್ಲೀನ್ ಬೋಲ್ಡ್ ಆಗಿದೆ - ಬಿಜೆಪಿ ಸೆಂಚುರಿ ಬಾರಿಸಿದೆ
ಟಿಎಂಸಿ ಎಷ್ಟೋ ಫೋರ್ -ಸಿಕ್ಸ್ಗಳನ್ನ ಹೊಡೆದಿರಬಹುದು. ಆದರೆ ಬಿಜೆಪಿ ಈಗಾಗಲೇ ಸೆಂಚುರಿ ಬಾರಿಸಿದೆ. ನಾಲ್ಕೇ ಹಂತಗಳಲ್ಲಿ ಟಿಎಂಸಿ ಕ್ಲೀನ್ ಬೋಲ್ಡ್ ಆಗಿದೆ. ದೀದಿ ಅವರಲ್ಲಿ ಕಹಿ ಮತ್ತು ಕೋಪ ಪ್ರತಿದಿನ ಹೆಚ್ಚುತ್ತಿದೆ. ನೀವು ಬೇಕಾದರೆ ನಿಮ್ಮ ಕೋಪವನ್ನು ನನ್ನ ಮೇಲೆ ತೋರಿಸಿ, ನಿಮಗೆ ಬೇಕಾದ ಹಾಗೆ ನಿಂದಿಸಿ. ಆದರೆ ಬಂಗಾಳದ ಘನತೆ ಮತ್ತು ಸಂಪ್ರದಾಯವನ್ನು ಅವಮಾನಿಸಬೇಡಿ. ನಿಮ್ಮ ದುರಹಂಕಾರವನ್ನು ಬಂಗಾಳದ ಜನತೆ ಸಹಿಸುವುದಿಲ್ಲ. ಏಕೆಂದರೆ ಜನ ಪರಿವರ್ತನೆ ಬಯಸಿದ್ದಾರೆ ಎಂದು ಮೋದಿ ಹೇಳಿದರು.