ನವದೆಹಲಿ : ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಮತ್ತು ಹಲಾಲ್ ಪ್ರಮಾಣೀಕರಣವನ್ನು ಹಿಂಪಡೆಯುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.
ವಕೀಲ ವಿಭೋರ್ ಆನಂದ್ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ತಮ್ಮ ಮೂಲಭೂತ ಹಕ್ಕುಗಳ ಜಾರಿಗಾಗಿ ದೇಶದ ಶೇ.85ರಷ್ಟು ನಾಗರಿಕರ ಪರವಾಗಿ ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಭಾರತದ ಜನಸಂಖ್ಯೆಯ ಶೇ.15 ಪ್ರತಿಶತ ಜನರ ಸಲುವಾಗಿ, ಉಳಿದ ಶೇ.85 ಪ್ರತಿಶತದಷ್ಟು ಜನರು ತಮ್ಮ ಇಚ್ಛೆಗೆ ವಿರುದ್ಧವಾಗಿ ಹಲಾಲ್ ಉತ್ಪನ್ನಗಳನ್ನು ಸೇವಿಸುವಂತೆ ಬಲವಂತಪಡಿಸುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಹಲಾಲ್ ಮಾಂಸವನ್ನು ಬಳಸದ ಜನರು ಅಥವಾ ಜಟ್ಕಾ ಮಾಂಸವನ್ನು ಮಾತ್ರ ಬಳಸಲು ಅನುಮತಿಸುವ ಧರ್ಮದ ಜನರಿಗೆ ಇನ್ನು ಮುಂದೆ ಈ ವಿಷಯದಲ್ಲಿ ಯಾವುದೇ ಆಯ್ಕೆಯಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜಮಿಯತ್ ಉಲಮಾ-ಎ-ಹಿಂದ್ ನಂತಹ ಕೆಲವು ಖಾಸಗಿ ಸಂಸ್ಥೆಗಳು ಹಲಾಲ್ ಪ್ರಮಾಣೀಕರಣವನ್ನು ಅಂಗೀಕರಿಸುವುದರಿಂದ ಗ್ರಾಹಕ ಉತ್ಪನ್ನಗಳ ಮೇಲೆ ಇರುವ ISI ಮತ್ತು FSSAI ನಂತಹ ಸರ್ಕಾರಿ ಪ್ರಮಾಣೀಕರಣವು ಸಾಕಾಗುವುದಿಲ್ಲ ಎಂದು ಹೇಳಲಾಗಿದೆ.
ಈಗ ಈ 'ಹಲಾಲ್' ಪ್ರಮಾಣೀಕರಣವು ಬರೀ ಮಾಂಸಕ್ಕೆ ಸೀಮಿತವಾಗಿರದೇ ಇದನ್ನು ಆಹಾರ ಪದಾರ್ಥಗಳು, ಸೌಂದರ್ಯವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ವಸತಿ ಸಂಘಗಳು ಮತ್ತು ಮಾಲ್‌ಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ವಿವಿಧ ಖಾಸಗಿ ಸಂಸ್ಥೆಗಳು ನೀಡುವ ಎಲ್ಲಾ ಪ್ರಮಾಣಪತ್ರಗಳನ್ನು ಅನೂರ್ಜಿತ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಜೊತೆಗೆ ಹಲಾಲ್ ಪ್ರಮಾಣೀಕರಿಸಿದ ಎಲ್ಲಾ ಉತ್ಪನ್ನಗಳನ್ನು ನಿಷೇಧಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಓದಿ : ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್ ಕುಮಾರ್ ರಾಜೀನಾಮೆ : ಸುಮನ್ ಬೆರಿ ನೇಮಕ