ಲಂಡನ್ : ಭಾರತದ ವಿರುದ್ಧ ಆಡುವುದು ಯಾವಾಗಲೂ ಒಂದು ರೀತಿಯ ರೋಮಾಂಚನಕಾರಿ ಸವಾಲಾಗಿರುತ್ತದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಬಣ್ಣಿಸಿದ್ದಾರೆ.
ಪ್ರಥಮ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಲು ತಾವು ಕುತೂಹಲದಿಂದ ಕಾಯುತ್ತಿರುವುದಾಗಿ ಕೇನ್ ಹೇಳಿದ್ದಾರೆ.
ಸೌತಾಂಪ್ಟನ್ನಲ್ಲಿ ಜೂನ್ 18ರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆರಂಭವಾಗಲಿದೆ. ಅದಕ್ಕೂ ಮುನ್ನ ಐಸಿಸಿ ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು, ಇದರಲ್ಲಿ ಕೇನ್ ವಿಲಿಯಮ್ಸನ್ ಮಾತನಾಡಿದ್ದಾರೆ.
ಫೈನಲ್ನಲ್ಲಿ ಆಡುವುದು ನಿಜವಾಗಿಯೂ ರೋಮಾಂಚಕವಾಗಿರಲಿದೆ ಮತ್ತು ಈ ಪಂದ್ಯವನ್ನು ಗೆದ್ದು ಸರ್ವಶ್ರೇಷ್ಠರಾಗುವುದು ನಮ್ಮ ಗುರಿಯಾಗಿದೆ ಎಂದು ವಿಲಿಯಮ್ಸನ್ ವಿಡಿಯೋದಲ್ಲಿ ಹೇಳಿದ್ದಾರೆ.
ಫೈನಲ್ವರೆಗೆ ತಲುಪಲು ನಾವೆಲ್ಲರೂ ಆಡಿದ ಪಂದ್ಯಗಳು ಅತ್ಯಂತ ಪೈಪೋಟಿಯಿಂದ ಕೂಡಿದ್ದವು. ಪ್ರತಿ ತಂಡವೂ ತನ್ನೆಲ್ಲ ಸಾಮರ್ಥ್ಯದಿಂದ ಈ ಪಂದ್ಯಗಳಲ್ಲಿ ಆಡಿವೆ. ಹೀಗಾಗಿಯೇ, ಈಗ ಫೈನಲ್ ಪಂದ್ಯ ನಿಜವಾದ ರೋಚಕತೆ ತರಲಿದೆ ಎಂದು ಅವರು ತಿಳಿಸಿದ್ದಾರೆ.
"ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಎಲ್ಲ ಮ್ಯಾಚ್ಗಳು ಅದ್ಭುತವಾಗಿದ್ದವು. ಭಾರತ-ಆಸ್ಟ್ರೇಲಿಯಾ ಮಧ್ಯದ ಹೋರಾಟದಂತೆ ಹಾಗೂ ನಾವು ಪಾಕಿಸ್ತಾನದ ವಿರುದ್ಧ ಆಡಿದಂತೆ ಪ್ರತಿ ಹಂತದಲ್ಲಿಯೂ ಕಠಿಣ ಸವಾಲುಗಳನ್ನು ಎದುರಿಸಿದ್ದೇವೆ" ಎಂದು 30 ವರ್ಷದ ಅತ್ಯುತ್ತಮ ಬ್ಯಾಟ್ಸಮನ್ ಆಗಿರುವ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.
ಜೂನ್ ಮೊದಲ ವಾರದಲ್ಲಿ ಭಾರತ ತಂಡವು ಲಂಡನ್ ತಲುಪುವ ನಿರೀಕ್ಷೆ ಇದೆ.