ನವದೆಹಲಿ: ಉತ್ತರ ಪ್ರದೇಶದ ಕನೌಜ್‌ನಲ್ಲಿರುವ ಉದ್ಯಮಿ ಪಿಯೂಷ್ ಜೈನ್ ಅವರ ನಿವಾಸದ ಮೇಲೆ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಅಧಿಕಾರಿಗಳು ನಡೆಸಿದ ದಾಳಿ ಬುಧವಾರ ಮುಕ್ತಾಯಗೊಂಡಿದೆ ಎಂದು ಡಿಜಿಜಿಐ ಹೆಚ್ಚುವರಿ ನಿರ್ದೇಶಕ ಜಾಕೀರ್ ಹುಸೇನ್ ತಿಳಿಸಿದ್ದಾರೆ.
ಕನೌಜ್‌ನಲ್ಲಿರುವ ನಿವಾಸದಲ್ಲಿ 19 ಕೋಟಿ ರೂ. ನಗದು ಹಾಗೂ ಎರಡಕ್ಕೂ ಹೆಚ್ಚು ಚೀಲ ಚಿನ್ನ ಸಿಕ್ಕಿದೆ. ವಶಪಡಿಸಿಕೊಂಡ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಆರ್‌ಐ) ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕನೌಜ್‌ನ ಸುಗಂಧ ದ್ರವ್ಯ ಮತ್ತು ಸಂಯುಕ್ತ ಉದ್ಯಮಿ ಪಿಯೂಷ್ ಜೈನ್ ಅವರ ಮನೆ, ಗೋದಾಮುಗಳು ಮತ್ತು ಕಾರ್ಖಾನೆಗಳ ಮೇಲೆ ಡಿಜಿಜಿಐ ಅಧಿಕಾರಿಗಳು ಸರಣಿ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ನಗದು, ಚಿನ್ನ ಮತ್ತು ಬೆಳ್ಳಿ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪಿಯೂಷ್ ಜೈನ್ ಮನೆಯಲ್ಲಿ ಸಿಕ್ಕಿದ್ದು 150 ಕೋಟಿ ಅಲ್ಲ..ಬರೋಬ್ಬರಿ 177 ಕೋಟಿ ರೂ. ನಗದು: ಇಂದೂ ದಾಳಿ ಮುಂದುವರಿಕೆ
ಕಳೆದ ವಾರದಿಂದ ಜೈನ್ ಒಡೆತನದ ಕಂಪನಿ, ಕಚೇರಿ ಮತ್ತು ಮನೆ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಐದು ದಿನಗಳ ದಾಳಿಯಲ್ಲಿ ಕಾನ್ಪುರದ ನಿವಾಸ ಮತ್ತು ಕಾರ್ಖಾನೆಯಲ್ಲಿ 194.45 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಇದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ವಶಪಡಿಸಿಕೊಂಡ ಅತಿ ಹೆಚ್ಚು ಮೌಲ್ಯವಾಗಿದೆ. ಇದನ್ನು ಹೊರತುಪಡಿಸಿ, ಡೈರೆಕ್ಟರೇಟ್ ಜನರಲ್ ಆಫ್ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಇಂಟೆಲಿಜೆನ್ಸ್ (ಡಿಜಿಜಿಐ) ಕಾನ್ಪುರದಲ್ಲಿರುವ ಜೈನ್ ಅವರ ಆವರಣ ಮತ್ತು ಕನೌಜ್‌ನಲ್ಲಿರುವ ಕಾರ್ಖಾನೆಯಿಂದ ಕೋಟಿ ರೂ. ಮೌಲ್ಯದ 600 ಕೆ.ಜಿ ಶ್ರೀಗಂಧ ಮತ್ತು ಸುಗಂಧ ದ್ರವ್ಯಗಳು ಜೊತೆಗೆ 25 ಕೆಜಿ ಚಿನ್ನ ಮತ್ತು 250 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದೆ.
ತೆರಿಗೆ ವಂಚನೆ ಆರೋಪಿ ಪಿಯೂಷ್ ಜೈನ್ನನ್ನು ಭಾನುವಾರ ಸಿಜಿಎಸ್ಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಬಂಧಿಸಲಾಗಿದ್ದು, ಕಾನ್ಪುರ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.