ಅಮ್ರೋಹಾ (ಉತ್ತರ ಪ್ರದೇಶ): ಇಲ್ಲಿನ ಕಾನೂನು ವಿದ್ಯಾರ್ಥಿಯೊಬ್ಬರ ಮೇಲೆ ಫೆ 28 ರಂದು ಪಿಟ್ ಬುಲ್ ನಾಯಿಯೊಂದು ದಾಳಿ ಮಾಡಿದ ಘಟನೆ ನಡೆದಿದೆ. ಶ್ವಾನ ದಾಳಿ ಘಟನೆಯ ನಂತರ ವಿದ್ಯಾರ್ಥಿಯ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ನಾಯಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದು, ಸಂತ್ರಸ್ತ ವಿದ್ಯಾರ್ಥಿಗೆ 5 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಪರಿಹಾರ ನೀಡದಿದ್ದರೆ ನಾಯಿಯನ್ನು ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ದೇಶದ ಎಲ್ಲೆಡೆಯಿಂದ ಕ್ರೂರ ಶ್ವಾನ ದಾಳಿಗಳ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಇಂಥ ಘಟನೆಗಳು ಮರುಕಳಿದಂತೆ ಮಾಡಲು ನಾಯಿ ಮಾಲೀಕರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾಯಿ ಮಾಲೀಕನ ವಿರುದ್ಧದ ಪ್ರಕರಣವನ್ನು ಪೊಲೀಸರು ಅಮ್ರೋಹಾ ಮುನಿಸಿಪಲ್ ಅಧಿಕಾರಿಗಳಿಗೆ ರವಾನಿಸಿದ್ದು, ಅವರು ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ.
ಎರಡು ದಿನಗಳ ಹಿಂದೆ ನಾಯಿಯೊಂದು ವಿದ್ಯಾರ್ಥಿಯೊಬ್ಬನಿಗೆ ಕಚ್ಚಿದೆ ಎಂದು ಅಮ್ರೋಹಾ ಮುನಿಸಿಪಲ್ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ. ನಾಯಿ ಕಚ್ಚಿದ ಘಟನೆಯ ಹೊಣೆಗಾರಿಕೆಯನ್ನು ನಾಯಿಯ ಮಾಲೀಕರು ತೆಗೆದುಕೊಳ್ಳಬೇಕು ಮತ್ತು 5 ಸಾವಿರ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಇನ್ನು ಮುಂದೆ, ನಾಯಿ ಮಾಲೀಕರು ತಮ್ಮ ನಾಯಿಗಳನ್ನು ನಿಯಂತ್ರಿಸುವ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಅಧಿಕಾರಿ ತಿಳಿಸಿದರು.
ನಾಯಿಯ ಮಾಲೀಕರು ಸಕಾಲದಲ್ಲಿ ದಂಡವನ್ನು ಪಾವತಿಸದಿದ್ದಲ್ಲಿ ಕಾನೂನಿನ ಸೂಕ್ತ ಸೆಕ್ಷನ್‌ಗಳನ್ನು ಬಳಸಿಕೊಂಡು ನಾಯಿಯನ್ನು ಜಪ್ತಿ ಮಾಡಲು ಪುರಸಭೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಲಾ ಮಕ್ಕಳು ಪದೇ ಪದೆ ನಾಯಿ ದಾಳಿಗೆ ಬಲಿಯಾಗುತ್ತಿರುವ ಬಗ್ಗೆ ಆತಂಕಕಾರಿ ಘಟನೆಗಳು ಹೊರಹೊಮ್ಮಿದ ನಂತರ ನಾಯಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಫೆಬ್ರವರಿ ಮೂರನೇ ವಾರದಲ್ಲಿ, ಹೈದರಾಬಾದ್‌ನ ಬಾಗ್ ಅಂಬರ್‌ಪೇಟ್‌ನಲ್ಲಿ ನಾಯಿಗಳ ಗುಂಪೊಂದು ನಾಲ್ಕು ವರ್ಷದ ಬಾಲಕನ ಮೇಲೆ ಕ್ರೂರವಾಗಿ ದಾಳಿ ಮಾಡಿ ಕೊಂದು ಹಾಕಿತ್ತು. ದುರಂತದ ಭೀಕರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಈ ಘಟನೆ ರಾಷ್ಟ್ರಾದ್ಯಂತ ಆಕ್ರೋಶ ಉಂಟು ಮಾಡಿತ್ತು. ಬಾಲಕನ ಸಾವು ನಿಮ್ಮ ಹೃದಯಕ್ಕೆ ತಾಕಲಿಲ್ಲವೇ ಎಂದು ಹೈಕೋರ್ಟ್ ಸಹ ಅಧಿಕಾರಿಗಳಿಗೆ ಪ್ರಶ್ನೆ ಮಾಡಿತ್ತು.
ನಾಯಿ ದಾಳಿಯ ಮತ್ತೊಂದು ಘಟನೆ : ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಬರೇಲಿಯ ಸಿಬಿ ಗಂಜ್ ಪ್ರದೇಶದಲ್ಲಿ ಬೀದಿನಾಯಿಗಳ ಹಿಂಡು ದಾಳಿ ಮಾಡಿದ್ದರಿಂದ ಮೂರು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಬಾಂಡಿಯಾ ಗ್ರಾಮದ ನಿವಾಸಿ ಅವಧೇಶ್ ಗಂಗಾವರ್ ಎಂಬವರ ಪುತ್ರಿ ಪರಿ ಎಂಬಾಕೆಯ ಮೇಲೆ ಮಂಗಳವಾರ ಸಂಜೆ ಸುಮಾರು 15 ರಿಂದ 20 ನಾಯಿಗಳ ಹಿಂಡು ದಾಳಿ ನಡೆಸಿದೆ. ಪರಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬೀದಿನಾಯಿಗಳು ದಾಳಿ ನಡೆಸಿವೆ. ನಾಯಿಗಳು ಬಾಲಕಿಯನ್ನು ಸುಮಾರು 100 ಮೀಟರ್‌ಗಳವರೆಗೆ ಎಳೆದೊಯ್ದು ಕ್ರೂರವಾಗಿ ಕಚ್ಚಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಬೀದಿ ನಾಯಿ ದಾಳಿ ಮಾಡಿದರೆ ಕೊಂದೇ ಬಿಡುವೆ.. ಏರ್ಗನ್ ಪ್ರದರ್ಶಿಸಿದ ವ್ಯಕ್ತಿ ವಿರುದ್ಧ ಕೇಸ್