ಜೈಪುರ (ರಾಜಸ್ಥಾನ): ರಾಜಸ್ಥಾನ ಕಾಂಗ್ರೆಸ್ನಲ್ಲಿ ಒಳಜಗಳ ಮುಂದುವರೆದಿದೆ. ಕಳೆದ ಕೆಲ ದಿನಗಳಿಂದ ಮೌನವಾಗಿದ್ದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪೈಲಟ್, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಪಕ್ಷದ ಮಾಜಿ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರೊಂದಿಗೆ ಹೋಲಿಕೆ ಮಾಡಿದರು. ಅಲ್ಲದೇ ರಾಜಸ್ಥಾನದ ಬನ್ಸವಾರಾದಲ್ಲಿ ನಡೆದ ಮಾನಗಢ್ ಗೌರವ್ ಗಾಥಾ ಕಾರ್ಯಕ್ರಮದಲ್ಲಿ ಸಿಎಂ ಗೆಹ್ಲೋಟ್ ಅವರು ಪ್ರಧಾನಿ ಮೋದಿಯನ್ನು ಹೊಗಳಿದ್ದನ್ನು ಸಹ ತರಾಟೆಗೆ ತೆಗೆದುಕೊಂಡರು.
ಹೈಕಮಾಂಡ್ ಮಾತು ಕೇಳದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ: ಸಿಎಂ ಜೊತೆಗೆ ಪಿಎಂ ಮೋದಿ ಕೂಡ ಸಿಎಂ ಗೆಹ್ಲೋಟ್ ಅವರನ್ನು ಹೊಗಳಿದ್ದಾರೆ. ಇದು ಬಹಳ ಆಸಕ್ತಿದಾಯಕ ಬೆಳವಣಿಗೆಯಾಗಿದೆ. ಏಕೆಂದರೆ ಪ್ರಧಾನಿ ಮೋದಿ ಗುಲಾಂ ನಬಿ ಆಜಾದ್ ಅವರನ್ನು ಅದೇ ರೀತಿಯಲ್ಲಿ ಹೊಗಳಿದ್ದರು, ಆದರೆ, ನಂತರ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಇನ್ನು ಹೈಕಮಾಂಡ್ ಆದೇಶ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿನ್ ಪೈಲಟ್ ಒತ್ತಾಯಿಸಿದ್ದಾರೆ.
ರಾಜಸ್ಥಾನಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 25 ರಂದು ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿತ್ತು, ಆದರೆ ಆ ಸಭೆ ನಡೆಯಲಿಲ್ಲ. ಇದಕ್ಕಾಗಿ ಸ್ವತಃ ಮುಖ್ಯಮಂತ್ರಿಗಳೇ ಪಕ್ಷಕ್ಕೆ ಹಾಗೂ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಲ್ಲಿ ಕ್ಷಮೆಯಾಚಿಸಿದ್ದಾರೆ. ಇದೆಲ್ಲವನ್ನೂ ಗಮನಿಸಿದ ಎಐಸಿಸಿ ಇದನ್ನು ಅಶಿಸ್ತಿನ ವಿಷಯವೆಂದು ಪರಿಗಣಿಸಿತ್ತು.
ಈ ಬಗ್ಗೆ ಮೂವರಿಗೆ ನೋಟಿಸ್ ನೀಡಲಾಗಿತ್ತು. ನಂತರ ನೋಟಿಸಿಗೆ ಉತ್ತರವನ್ನೂ ನೀಡಲಾಗಿತ್ತು. ಆ ಬಗ್ಗೆಯೂ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಪೈಲಟ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಮೋದಿ, ರಾಜಸ್ಥಾನ ಸಿಎಂ: ಕುತೂಹಲ ಕೆರಳಿಸಿದ ಇಬ್ಬರ ಮಾತು!