ಜಾಮುಯಿ (ಬಿಹಾರ): ಈ ನಾಲ್ಕು ಮಕ್ಕಳ ಚಿತ್ರವೊಂದು ಇತ್ತೀಚೆಗೆ ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ದೇಶದ ಹಲವಾರು ರಾಜ್ಯಗಳಲ್ಲಿ ಅತಿವೃಷ್ಟಿಯಿಂದ ಜನ ಕಂಗಾಲಾಗಿದ್ದರೆ, ಬಿಹಾರದಲ್ಲಿ ಮಾತ್ರ ಮಳೆಯಾಗದೆ ಜನ ನೀರಿಗಾಗಿ ಪರಿತಪಿಸುವಂತಾಗಿದೆ. ಹೀಗಾಗಿ ಇಲ್ಲಿನ ಜನ ವರುಣದೇವನನ್ನು ಸಂತೃಪ್ತಗೊಳಿಸಲು ಕಪ್ಪೆಗಳ ಮದುವೆ ಮಾಡಿಸುವುದು, ಮಣ್ಣು ಅಥವಾ ರಾಡಿ ನೀರಿನಲ್ಲಿ ಮುಳುಗುವುದು ಹೀಗೆ ಏನೇನೋ ಮಾಡುತ್ತಿದ್ದಾರೆ.
ಇಂಥದೇ ಒಂದು ಘಟನೆ ಈಗ ಬಿಹಾರದ ಜಾಮುಯಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮಳೆ ಬರಲಿ ಎಂದು ಪ್ರಾರ್ಥಿಸಿ ನಾಲ್ವರು ಮಕ್ಕಳು ತಮ್ಮ ಮೈಯನ್ನು ಸಂಪೂರ್ಣ ಕೆಸರಿನಿಂದ ಮೆತ್ತಿಕೊಂಡಿದ್ದಾರೆ. ದಾರಿಹೋಕರೊಬ್ಬರು, ಊರ ಹೊರಗೆ ಆಡುತ್ತ ಮೈಯೆಲ್ಲ ಕೆಸರು ಮಾಡಿಕೊಂಡು ನಿಂತಿದ್ದ ಈ ಮಕ್ಕಳ ಫೋಟೊ ಸೆರೆಹಿಡಿದು ಇಂಟರ್ನೆಟ್ಗೆ ಅಪ್ಲೋಡ್ ಮಾಡಿದ್ದಾರೆ. ಮುಗ್ಧ ಮಕ್ಕಳ ಈ ಚಿತ್ರ ಈಗ ಫುಲ್ ವೈರಲ್.
ಈ ಮಧ್ಯೆ ಬಿಹಾರದ ಜಾಮುಯಿ, ಸಿವಾನ್, ಸೀತಾಮಢಿ, ಸಮಸ್ತಿಪುರ, ಮುಂಗೇರ್ ಮತ್ತು ದರ್ಭಂಗಾ ಸೇರಿದಂತೆ ಇನ್ನೂ ಹಲವಾರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಿದೆ. ಮಕ್ಕಳ ಪ್ರಾರ್ಥನೆಗೆ ವರುಣದೇವ ಕೊನೆಗೂ ಪ್ರಸನ್ನನಾಗಿರಬಹುದು ಅಲ್ಲವೇ.?