ಕಾನ್ಪುರ (ಉತ್ತರಪ್ರದೇಶ) : ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳ ಕೋಚಿಂಗ್ ಹಬ್ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಸಾಲು ಸಾಲು ಸಾವು ದೇಶವನ್ನೇ ಬೆಚ್ಚಿಬೀಳಿಸಿದೆ. ಇದೀಗ ಆ ಸರಣಿ ಉತ್ತರಪ್ರದೇಶದ ಐಐಟಿ ಕಾನ್ಪುರದಲ್ಲಿ ಮುಂದುವರಿದಿದೆ. ಇಲ್ಲಿನ ಕ್ಯಾಂಪಸ್‌ನಲ್ಲಿ ಕೇವಲ 2 ತಿಂಗಳಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುರುವಾರ ಐಐಟಿ ಕಾನ್ಪುರದಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿ ಪ್ರಿಯಾಂಕಾ ಜೈಸ್ವಾಲ್ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸಂಸ್ಥೆಯಲ್ಲಾಗುತ್ತಿರುವ ಮೂರನೇ ಪ್ರಕರಣವಾಗಿದೆ. ಹಾಸ್ಟೆಲ್ ಸಂಖ್ಯೆ 4 ರಲ್ಲಿನ 312 ನೇ ಕೊಠಡಿಯಲ್ಲಿ ವಾಸವಿದ್ದ ಅವರು, ಗುರುವಾರ ಮಧ್ಯಾಹ್ನದ ವೇಳೆ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು, ಫೋರೆನ್ಸಿಕ್ ತಂಡ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಐಐಟಿ ಕಾನ್ಪುರದ ಪಿಎಚ್‌ಡಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಬಂದಿತು. ಕಿಟಕಿಯಿಂದ ಇಣುಕಿ ನೋಡಿದಾಗ ಆಕೆ ಶವವಾಗಿ ಪತ್ತೆಯಾಗಿದ್ದಾರೆ. ಕೊಠಡಿ ಮುಚ್ಚಲಾಗಿತ್ತು. ಫೋರೆನ್ಸಿಕ್ ಘಟಕವನ್ನು ಸ್ಥಳಕ್ಕೆ ಕರೆಸಲಾಯಿತು. ಕ್ಯಾಂಪಸ್‌ಗೆ ಸಿಬ್ಬಂದಿ ಕಳುಹಿಸಲಾಯಿತು. ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಣೆ ಮಾಡಿದ್ದಾರೆ. ತನಿಖೆಯ ಬಳಿಕ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣ ತಿಳಿಯಲಿದೆ. ಇದೇ ವೇಳೆ, ವಿದ್ಯಾರ್ಥಿನಿ ಸಾವಿನ ಬಗ್ಗೆ ಸಹ ವಿದ್ಯಾರ್ಥಿಗಳು ಮೌನವಾಗಿದ್ದಾರೆ. ಯಾರೂ ಏನನ್ನೂ ಹೇಳುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ತಿಂಗಳೊಳಗೆ ಮೂರನೇ ಆತ್ಮಹತ್ಯೆ: ಎರಡು ತಿಂಗಳೊಳಗೆ ಐಐಟಿ ಕಾನ್ಪುರ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಮತ್ತು ಸಂಶೋಧನಾ ಅಧ್ಯಾಪಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಮೂರನೇ ಪ್ರಕರಣವಾಗಿದೆ. ಕಳೆದ ಡಿಸೆಂಬರ್ನಲ್ಲಿ ಒಡಿಶಾದ ಸಂಶೋಧನಾ ವಿಭಾಗದ ಡಾ.ಪಲ್ಲವಿ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಜನವರಿ ಮೊದಲ ವಾರದಲ್ಲಿ ಮೀರತ್‌ನ ಪಿಎಚ್‌ಡಿ ವಿದ್ಯಾರ್ಥಿ ವಿಕಾಸ್ ಮೀನಾ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾನ್ಪುರದ ಐಐಟಿಯಲ್ಲಿ ಪಿಎಚ್‌ಡಿ ವಿದ್ಯಾರ್ಥಿಗಳ ಸರಣಿ ಸಾವಿನಿಂದಾಗಿ ಆಡಳಿತಾತ್ಮಕ ಅಧಿಕಾರಿಗಳ ಕಾರ್ಯಶೈಲಿಯ ಮೇಲೆ ಈಗ ಪ್ರಶ್ನೆಗಳು ಎದ್ದಿವೆ.
ಸಾವಿನ ಮನೆಯಾದ ಕೋಟಾ: ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಕೋಚಿಂಗ್ ಪಡೆಯುತ್ತಿದ್ದ ವಿದ್ಯಾರ್ಥಿನಿ ಡಿಸೆಂಬರ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಇಲ್ಲಿ ನಡೆದ 26 ನೇ ಪ್ರಕರಣವಾಗಿದೆ. ನೀಟ್ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳ ನೆಚ್ಚಿನ ತಾಣವಾದ ಕೋಟಾದಲ್ಲಿ ವಿದ್ಯಾರ್ಥಿಗಳು ಸರಣಿಯಾಗಿ ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಇದಕ್ಕಾಗಿ ಇಲ್ಲಿನ ಆಡಳಿತ ಮಂಡಳಿ ಹಲವು ಕ್ರಮಗಳನ್ನು ಜಾರಿ ಮಾಡಿದಾಗ್ಯೂ ಸಾವು ನಿಲ್ಲುತ್ತಿಲ್ಲ.
ಇದನ್ನೂ ಓದಿ: ಕೋಟಾದಿಂದ ಮತ್ತೆ ಸುಸೈಡ್ ಸುದ್ದಿ: ನೀಟ್ ಆಕಾಂಕ್ಷಿ ಆತ್ಮಹತ್ಯೆ