ಎರ್ನಾಕುಲಂ, ಕೇರಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನ ನಾಯಕರ ವಿರುದ್ಧ ಎನ್‌ಐಎ ಕ್ರಮವನ್ನು ವಿರೋಧಿಸಿ ನಡೆಸಿದ ಹರತಾಳದ ವಿರುದ್ಧ ಕೇರಳ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಘಟನೆಯನ್ನು ಸ್ವಯಂ ಧ್ಯೇಯವಾಗಿ ಕೈಗೆತ್ತಿಕೊಂಡ ಹೈಕೋರ್ಟ್, ಪಿಎಫ್‌ಐ ಕ್ರಮವನ್ನು ನ್ಯಾಯಾಲಯದ ನಿಂದನೆ ಎಂದು ಬಣ್ಣಿಸಿದೆ. ಹರತಾಳ ನಡೆಸುವ ಬಗ್ಗೆ ಹೈಕೋರ್ಟ್ ಸ್ಪಷ್ಟ ಸೂಚನೆ ನೀಡಿತ್ತು. ಹರತಾಳ ನಡೆಸುವ ಏಳು ದಿನಗಳ ಮೊದಲು ರಾಜಕೀಯ ಪಕ್ಷಗಳು ನೋಟಿಸ್ ನೀಡಬೇಕಾಗುತ್ತದೆ. ಪಿಎಫ್‌ಐ ಹೈಕೋರ್ಟ್ ನಿರ್ದೇಶನವನ್ನು ಅನುಸರಿಸಲಿಲ್ಲ. ಅಷ್ಟೇ ಅಲ್ಲ ಹಠಾತಾಗಿ ಪಿಎಫ್‌ಐ ಹರತಾಳ ಘೋಷಿಸಿದೆ. ಹರತಾಳವನ್ನು ನಡೆಸುವ 24 ಗಂಟೆಗಳ ಹಿಂದೆಯೂ ಯಾವುದೇ ಸೂಚನೆ ನೀಡಿಲ್ಲ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿತು.
ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಗಳನ್ನು ಸಲ್ಲಿಸಬೇಕು. ಈ ಹರತಾಳವನ್ನು ಬೆಂಬಲಿಸಿದವರನ್ನು ಗಮನಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸಾಕಷ್ಟು ಭದ್ರತೆಯನ್ನು ಒದಗಿಸಲು ಮತ್ತು ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಆಯೋಜಿಸಿದ್ದ ರಾಜ್ಯಾದ್ಯಂತ ಹರತಾಳದ ಸಂದರ್ಭದಲ್ಲಿ ಹಲವಾರು ಹಿಂಸಾಚಾರದ ಘಟನೆಗಳು ವರದಿಯಾಗಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೇಶಾದ್ಯಂತ ದಾಳಿ ಮತ್ತು ಬಂಧನಗಳನ್ನು ವಿರೋಧಿಸಿ ಮುಷ್ಕರವನ್ನು ಸಂಜೆವರೆಗೆ ನಡೆಸಲಾಗುತ್ತದೆ ಎಂದು ಪಿಎಫ್‌ಐ ಘೋಷಿಸಿತ್ತು. ಕೇರಳ ಹೈಕೋರ್ಟ್ ತನ್ನ ತೀರ್ಪನ್ನು ಉಲ್ಲಂಘಿಸಿದ್ದಕ್ಕಾಗಿ ಪಿಎಫ್‌ಐ ಅನ್ನು ತರಾಟೆಗೆ ತೆಗೆದುಕೊಂಡಿದೆ.
ಓದಿ: ಕೇರಳದಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸಾಚಾರ: ಎಸ್ಡಿಪಿಐ ಕಾರ್ಯಕರ್ತನ ಅಂಗಡಿಗೆ ಬೆಂಕಿ