ನವದೆಹಲಿ:ಸತತ ನಾಲ್ಕನೇ ವಾರವೂ ಇಂಧನ ಬೆಲೆ ಏರಿಕೆ ಕಂಡಿದ್ದು, ಶನಿವಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 35 ಪೈಸೆ ಹೆಚ್ಚಿಸಲಾಗಿದೆ. 2020ರ ಮೇ ನಿಂದ ಇಲ್ಲಿಯವರೆಗೆ ಪೆಟ್ರೋಲ್ ದರ ಲೀಟರ್‌ಗೆ 36 ರೂ.ಗೆ ಮತ್ತು ಡೀಸೆಲ್ ದರ 26.58 ರೂ. ಗೆ ಹೆಚ್ಚಳವಾದಂತಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್‌ಗೆ 107.24 ರೂ ಮತ್ತು ಡೀಸೆಲ್ ರೂ 95.97 ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಅನುಗುಣವಾಗಿ ಕಂಪನಿಗಳು ದೇಶದಲ್ಲಿ ಇಂಧನ ದರ ಹೆಚ್ಚಿಸಿವೆ. ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಸದ್ಯ ಗರಿಷ್ಠ ಮಟ್ಟದಲ್ಲಿವೆ. ಪ್ರಮುಖ ಎಲ್ಲ ನಗರಗಳಲ್ಲಿ ಪೆಟ್ರೋಲ್ ದರವು ಲೀಟರಿಗೆ 100ರ ಗಡಿ ದಾಟಿ ಮಾರಾಟವಾಗುತ್ತಿದೆ. 12ಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಡೀಸೆಲ್ ದರವು ಲೀಟರ್‌ಗೆ ಮೂರಂಕಿ ದಾಟಿದೆ.
1.34 ಲಕ್ಷ ಕೋಟಿ ತೈಲ ಬಾಂಡ್‌ಗಳಲ್ಲಿ ರೂ. 3,500 ಕೋಟಿ ಮಾತ್ರ ಪಾವತಿಸಲಾಗಿದೆ ಮತ್ತು ಉಳಿದ 1.3 ಲಕ್ಷ ಕೋಟಿ ಈ ಹಣಕಾಸು ಮತ್ತು 2025-26 ರ ನಡುವೆ ಮರುಪಾವತಿ ಮಾಡಲು ಬಾಕಿ ಇದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ ಜುಲೈನಲ್ಲಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸಂಗ್ರಹವು ಶೇ. 88 ರಷ್ಟು ಏರಿಕೆಯಾಗಿದ್ದು, ಮಾರ್ಚ್ 31 ಕ್ಕೆ ರೂ. 1.78 ಲಕ್ಷ ಕೋಟಿಯಿಂದ ವರ್ಷಕ್ಕೆ ರೂ. 3.35 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.