ಪ್ರಯಾಗರಾಜ್(ಉತ್ತರಪ್ರದೇಶ): ಮಥುರಾ-ವೃಂದಾವನದ 22 ವಾರ್ಡ್‌ಗಳಲ್ಲಿ ರಾಜ್ಯ ಸರ್ಕಾರವು ಮದ್ಯ ಮತ್ತು ಮಾಂಸ ಮಾರಾಟ ನಿಷೇಧ ಮಾಡಿದ್ದು, ಈ ಆದೇಶದ ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಭಾರತ ವೈವಿಧ್ಯತೆಗಳ ದೇಶವಾಗಿದೆ. ದೇಶದಲ್ಲಿ ಏಕತೆಗಾಗಿ ಎಲ್ಲಾ ಸಮುದಾಯ, ಧರ್ಮದವರನ್ನು ಗೌರವಿಸುವುದು ಬಹಳ ಮುಖ್ಯ. ದೇಶದಲ್ಲಿ ವೈವಿಧ್ಯತೆಯಲ್ಲಿ ಏಕತೆಯಿರುವುದೇ ಸೊಗಸು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಥುರಾದ ಸಾಮಾಜಿಕ ಕಾರ್ಯಕರ್ತೆ ಶಾಹಿದಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಶ್ರೀವಾಸ್ತವ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಸ್ಥಳೀಯ ಪೊಲೀಸರು ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಮದ್ಯ ಮತ್ತು ಮಾಂಸ ಮಾರಾಟ ನಿಷೇಧವನ್ನು ತೆಗೆದುಹಾಕಬೇಕು. ಇಷ್ಟದ ಆಹಾರವನ್ನು ಸೇವಿಸುವುದು ಜನರ ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ಶಾಹಿದಾ ಅವರು ಪಿಐಎಲ್ನಲ್ಲಿ ಉಲ್ಲೇಖಿಸಿದ್ದರು.
ಸೆಪ್ಟೆಂಬರ್ 10, 2021ರಂದು ರಾಜ್ಯ ಸರ್ಕಾರವು ಮಥುರಾ-ವೃಂದಾವನ ಕೃಷ್ಣ ಜನ್ಮಭೂಮಿಯ 10 ಚದರ್ ಕಿಲೋಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿದೆ. ಒಂದು ವೇಳೆ ಮದ್ಯ ಮತ್ತು ಮಾಂಸ ಮಾರಾಟ ಮಾಡಿದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ. ಸ್ಥಳೀಯ ಆಡಳಿತದ ಈ ಆದೇಶದಿಂದ ಬೇಸರಗೊಂಡ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ವಿಮಾನದಲ್ಲಿ ಬಾಂಬ್..! ಹುಸಿ ಕರೆಗೆ ಬೆಚ್ಚಿಬಿದ್ದ ಶ್ರೀನಗರ, ದೆಹಲಿಗೆ ಹೊರಟಿದ್ದ ಗೋಫಸ್ಟ್ ಏರ್ಲೈನ್ ವಿಳಂಬ