ನವದೆಹಲಿ : ಭ್ರಷ್ಟಾಚಾರವನ್ನು ಗೆದ್ದಲಿಗೆ ಹೋಲಿಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಭ್ರಷ್ಟಾಚಾರ ತೊಡೆದು ಹಾಕಲು ಜನರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮದ 85ನೇ ಆವೃತ್ತಿ ಹಾಗೂ ಈ ವರ್ಷದ ಮೊದಲ 'ಮನ್ ಕಿ ಬಾತ್'ನಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ದೇಶದ ವಿವಿಧ ಭಾಗಗಳಿಂದ ಒಂದು ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಮನ್ ಕಿ ಬಾತ್ ಅನ್ನು ಪೋಸ್ಟ್ ಕಾರ್ಡ್‌ಗಳ ಮೂಲಕ ಕಳುಹಿಸಿದ್ದಾರೆ. ಈ ಪೋಸ್ಟ್‌ಕಾರ್ಡ್‌ಗಳು ನಮ್ಮ ದೇಶದ ಭವಿಷ್ಯಕ್ಕಾಗಿ ಹೊಸ ಪೀಳಿಗೆಯ ವಿಶಾಲ ಮತ್ತು ಸಮಗ್ರ ದೃಷ್ಟಿಕೋನವನ್ನು ನೀಡುತ್ತವೆ ಎಂದು ಹೇಳಿದರು.
ಭ್ರಷ್ಟಾಚಾರ ಮುಕ್ತ ಭಾರತ : ಉತ್ತರಪ್ರದೇಶದ ಬಾಲಕಿಯೊಬ್ಬಳು ಕಳುಹಿಸಿದ ಪೋಸ್ಟ್‌ಕಾರ್ಡ್ ಕುರಿತು ಮಾತನಾಡಿದ ಮೋದಿ, ಈ ಬಾಲಕಿ 2047ರ ವೇಳೆಗೆ ಭ್ರಷ್ಟಾಚಾರ ಮುಕ್ತ ಭಾರತವನ್ನು ಕಾಣಬೇಕು ಎಂದು ಬರೆದಿದ್ದಾಳೆ. ಭ್ರಷ್ಟಾಚಾರವು 'ಗೆದ್ದಲು' ಇದ್ದಂತೆ, ಅದು ದೇಶವನ್ನು ಟೊಳ್ಳಾಗಿಸುತ್ತದೆ. ಇದನ್ನು ತೊಲಗಿಸಲು 2047ರವರೆಗೆ ಯಾಕೆ ಕಾಯಬೇಕು? ದೇಶದ ಎಲ್ಲಾ ಜನರು ಒಗ್ಗೂಡಿದರೆ ಈ ಕೆಲಸವನ್ನು ಆದಷ್ಟು ಬೇಗ ಮಾಡಬಹುದು. ಹೀಗಾಗಿ, ನಾವು ನಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡುವುದು ಬಹಳ ಮುಖ್ಯ. ಕರ್ತವ್ಯ ಪ್ರಜ್ಞೆ ಇರುವಲ್ಲಿ, ಕರ್ತವ್ಯವು ಸರ್ವೋಚ್ಛವಾಗಿರುವಲ್ಲಿ ಭ್ರಷ್ಟಾಚಾರವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: 30 ವರ್ಷಗಳ ಭಾರತ-ಇಸ್ರೇಲ್ ದ್ವಿಪಕ್ಷೀಯ ಸಂಬಂಧ ಶ್ಲಾಘಿಸಿದ ಪ್ರಧಾನಿ ಮೋದಿ
ಅಮರ್ ಜವಾನ್ ಜ್ಯೋತಿ : ಇಂಡಿಯಾ ಗೇಟ್ ಬಳಿ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ 'ಅಮರ್ ಜವಾನ್ ಜ್ಯೋತಿ' ಬೆಳಗಿಸಿದ್ದಕ್ಕೆ ಯೋಧರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜ್ಯೋತಿ ಬೆಳಗುತ್ತಿರುವ ಭಾವನಾತ್ಮಕ ಕ್ಷಣದಲ್ಲಿ, ಅನೇಕ ದೇಶವಾಸಿಗಳು ಮತ್ತು ಹುತಾತ್ಮರ ಕುಟುಂಬದವರ ಕಣ್ಣಲ್ಲಿ ನೀರು ತುಂಬಿತ್ತು ಎಂದ ಪ್ರಧಾನಿ, ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವಂತೆ ಜನರನ್ನು ಒತ್ತಾಯಿಸಿದರು.
ಕೊರೊನಾ ಮೂರನೇ ಅಲೆ : ಹೊಸ ಕೋವಿಡ್ ಅಲೆಯೊಂದಿಗೆ ಭಾರತವು ಉತ್ತಮ ಯಶಸ್ಸಿನೊಂದಿಗೆ ಹೋರಾಡುತ್ತಿದೆ. ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಮೂರೇ ವಾರಗಳಲ್ಲಿ ಸುಮಾರು ನಾಲ್ಕೂವರೆ ಕೋಟಿ ಮಕ್ಕಳಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ. 20 ದಿನಗಳಲ್ಲಿ, ಒಂದು ಕೋಟಿ ಜನರು ಬೂಸ್ಟರ್ ಡೋಸ್ ಪಡೆದಿದ್ದಾರೆ. ಸ್ಥಳೀಯ ಲಸಿಕೆ ಮೇಲಿನ ನಮ್ಮ ದೇಶವಾಸಿಗಳ ಈ ನಂಬಿಕೆಯೇ ನಮ್ಮ ದೊಡ್ಡ ಶಕ್ತಿಯಾಗಿದೆ. ಸಾಂಕ್ರಾಮಿಕ ರೋಗದ ನಡುವೆ ಸುರಕ್ಷಿತೆಯ ಜೊತೆಗೆ ಆರ್ಥಿಕ ಚಟುವಟಿಕೆಗಳ ವೇಗವನ್ನು ಕಾಪಾಡಿಕೊಳ್ಳಬೇಕು ಎಂದು ಪಿಎಂ ಮೋದಿ ತಿಳಿಸಿದರು.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ