ಮಾಲ್ಡಾ (ಪಶ್ಚಿಮ ಬಂಗಾಳ): ಇಲ್ಲಿನ ಮಾಲಾ ನದಿಯಲ್ಲಿ ಎರಡು ದಿನಗಳ ಹಿಂದಷ್ಟೇ ದುರ್ಗಾ ದೇವಿ ನಿಮಜ್ಜನ ವೇಳೆ ದಿಢೀರ್ ಪ್ರವಾಹ ಉಂಟಾಗಿ 8 ಜನರು ಕೊಚ್ಚಿಕೊಂಡು ಹೋದ ಕಹಿ ನಡೆದಿತ್ತು. ಈಗ ಗಂಗಾ ನದಿಯಲ್ಲಿ 15 ದಿನದ ಹೆಣ್ಣು ಮಗುವೊಂದು ತೇಲಿಬಂದಿದ್ದು, ಇದನ್ನು ಕಂಡ ಜನರು ರಕ್ಷಿಸಿದ್ದಾರೆ.
ಮಾಲ್ಡಾ ಜಿಲ್ಲೆಯಲ್ಲಿ ಹರಿಯುವ ಗಂಗಾ ನದಿ ದಡದಲ್ಲಿ ಕೆಲವರು ಕುಳಿತು ಹರಟೆ ಹೊಡೆಯುತ್ತಿದ್ದಾಗ, ನೀರಿನಲ್ಲಿ ಬಲೂನ್ ತೇಲಿಕೊಂಡು ಹೋಗುತ್ತಿದ್ದುದು ಕಂಡುಬಂದಿದೆ. ಬಳಿಕ ಅದರಿಂದ ಮಗುವಿನ ಅಳುವಿನ ಸದ್ದು ಕೇಳಿಸಿದೆ.
ತಕ್ಷಣವೇ ಎಚ್ಚೆತ್ತುಕೊಂಡ ಜನರು ಅದರಲ್ಲಿ ಮಗು ಇರುವುದನ್ನು ಕಂಡು ದಡದುದ್ದಕ್ಕೂ ಓಡಿಹೋಗಿ ರಕ್ಷಣೆಗೆ ಮುಂದಾದಾಗ ನೀರಿನ ರಭಸಕ್ಕೆ ಬಲೂನ್ ದೂರ ಸಾಗಿದೆ. ಬಳಿಕ ಜನರು ದೋಣಿಯಲ್ಲಿ ಸಾಗಿ ಗಂಗಾನದಿ ಮತ್ತು ಕೋಶಿ ನದಿಯ ಹತ್ತಿರದ ಸಂಗಮಕ್ಕೂ ಮೊದಲು ಮಗುವನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತಂದಿದ್ದಾರೆ.
ಸುಡುವ ಬಿಸಿಲಿನಿಂದ ಮಗು ಸುಸ್ತಾಗಿ ಅಳುತ್ತಿತ್ತು. ಮಗು ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಮಗುವನ್ನು ಠಾಣೆಗೆ ಕರೆದೊಯ್ದರು. ಹಾಲು ಕುಡಿಸಿದ ನಂತರ ಚಿಕಿತ್ಸೆಗಾಗಿ ಮಾಲ್ಡಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರ್ಗಾಮಾತೆಯ ಆಶೀರ್ವಾದದಿಂದ ಮಗು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ನದಿಯಲ್ಲಿ ತೇಲಿಬಂದರೂ ಯಾವುದೇ ಗಾಯಗಳಾಗಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಮಗು ಬಿಹಾರದಿಂದ ತೇಲಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸರು ಪೋಷಕರ ಪತ್ತೆಗೆ ಮುಂದಾಗಿದ್ದಾರೆ.
ಓದಿ: ಕಾರು ಸಮೇತ ಅಲಕಾನಂದ ನದಿಗೆ ಬಿದ್ದ ವ್ಯಕ್ತಿ: ಎಸ್‌ಡಿಆರ್‌ಎಫ್ ಸಿಬ್ಬಂದಿಯಿಂದ ರಕ್ಷಣೆ