ಡಾರ್ಜಿಲಿಂಗ್ ( ಪಶ್ಚಿಮ ಬಂಗಾಳ) : ತಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಅಸ್ಸೋಂನ ಜನ ಹೇಳುತ್ತಿದ್ದಾರೆ. ತಮಿಳುನಾಡು, ಬಂಗಾಳದ ಪರಿಸ್ಥಿತಿ ಕೂಡ ಇದೇ ಆಗಿದೆ. ಬಿಜೆಪಿ, ಆರೆಸ್ಸೆಸ್ ಎಲ್ಲಿಗೆ ಹೋದರೂ ಅಲ್ಲಿ ದ್ವೇಷ ತೀವ್ರಗೊಳ್ಳಲು ಪ್ರಾರಂಭವಾಗುತ್ತದೆ ಎಂದು ಡಾರ್ಜಿಲಿಂಗ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಆರೆಸ್ಸೆಸ್, ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಕೋವಿಡ್ ಸಂದರ್ಭದಲ್ಲಿ ಅದನ್ನು ತಡೆಗಟ್ಟಲು ಕ್ರಮಕೈಗೊಳ್ಳುವ ಬದಲು ತಟ್ಟೆ ಬಡಿಯಿರಿ, ದೀಪ ಬೆಳಗಿಸಿ, ಮೊಬೈಲ್ ಫ್ಲಾಶ್ ಆನ್ ಮಾಡಿ ಎನ್ನುತ್ತಾರೆ ಈ ವ್ಯಕ್ತಿ.. ವಿಪರ್ಯಾಸ ಎಂದರೆ ಇವರು ನಮ್ಮ ದೇಶದ ಪ್ರಧಾನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ : ಪ.ಬಂಗಾಳದ 5ನೇ ಹಂತದ ಪ್ರಚಾರ ಅಂತ್ಯ.. ಬಿಜೆಪಿ-RSS ಹೋದ ಕಡೆಗೆಲ್ಲ ದ್ವೇಷ ಹರಡುತ್ತೆ ಎಂದ ರಾಹುಲ್ ಗಾಂಧಿ
ಕೋವಿಡ್ ಉಲ್ಬಣಗೊಂಡ ಬಳಿಕ ಮಾಧ್ಯಮಗಳು ಒತ್ತಡ ಹಾಕುತ್ತವೆ. ಆ ಬಳಿಕ ಫೆಬ್ರವರಿಯಲ್ಲಿ ಪ್ರಧಾನಿ ಮತ್ತು ಅವರ ತಂಡ ಕೋವಿಡ್ ತಡೆಗಟ್ಟುವ ಕುರಿತು ಪ್ರಧಾನಿ ಸಲಹೆಗಾರ ಜೊತೆ ಚರ್ಚಿಸುತ್ತಾರೆ. ದೇಶದಲ್ಲಿ ಕೋವಿಡ್ ಹೆಚ್ಚಾಗುತ್ತಿದೆ, ಪ್ರಧಾನಿಯವರು ದೇಶದ ಆರ್ಥಿಕತೆ, ಕಾರ್ಮಿಕರು ಮತ್ತು ಸಣ್ಣ ಕೈಗಾರಿಕೆಗಳ ರಕ್ಷಣೆಗಾಗಿ ಸಿದ್ದತೆ ಮಾಡಿಕೊಳ್ಳುವಂತೆ ಕಳೆದ ವರ್ಷ ಫೆಬ್ರವರಿಯಲ್ಲಿ ನಾನು ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಹೇಳಿದ್ದರು. ಆಗ ಮಾಧ್ಯಮಗಳು ನಾವು ಕಾರ್ಮಿಕರಲ್ಲಿ ಭಯ ಹುಟ್ಟಿಸುತ್ತಿರುವುದಾಗಿ ಹೇಳಿದ್ದವು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈಗಾಗಲೇ ನಾಲ್ಕು ಹಂತದ ಚುನಾವಣೆ ಮುಕ್ತಾಯಗೊಂಡಿದ್ದು, ಐದನೇ ಹಂತದ ಚುನಾವಣೆ ಏಪ್ರಿಲ್ 17 ರಂದು ನಡೆಯಲಿದೆ. ಮೇ 2 ರಂದು ಮತ ಎಣಿಕೆ ನಡೆಯಲಿದೆ.