ನವದೆಹಲಿ: ಫ್ರಾನ್ಸ್‌ನ ಫಾರ್‌ಬಿಡನ್ ಸ್ಟೋರೀಸ್ ಸಮೂಹ ನಡೆಸಿದ ತನಿಖಾ ವರದಿಯನ್ನು ಭಾರತ ಸೇರಿ ವಿಶ್ವದ 15 ಮಾಧ್ಯಮ ಸಂಸ್ಥೆಗಳ ಜತೆ ಹಂಚಿಕೊಂಡಿದೆ. ಪೆಗಾಸಸ್ ಎಂಬ ಕಣ್ಗಾವಲು ಸಾಫ್ಟ್ವೇರ್ ಮೂಲಕ ಕೇಂದ್ರ ಸರ್ಕಾರ ಕಣ್ಗಾವಲು ನಡೆಸಲು ಟಾರ್ಗೆಟ್ ಮಾಡಿದ್ದರ ಬಗ್ಗೆ ದಿ ವೈರ್ ವರದಿ ಪ್ರಕಟಿಸಿದೆ. ಮುಂಗಾರು ಅಧಿವೇಶನದ ಆರಂಭದಲ್ಲಿ ಈ ವಿವಾದ ಎದ್ದಿದ್ದು, ಅಧಿವೇಶನದಲ್ಲಿ ಸರ್ಕಾರಕ್ಕೆ ಇದು ಮುಳುವಾಗಲಿದೆ.
ವೈರ್ ವರದಿ ಪ್ರಕಾರ, ದೇಶದ ವಿರೋಧ ಪಕ್ಷಗಳ ನಾಯಕರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರದ ಹಾಲಿ ಸಚಿವರಾದ ಅಶ್ವಿನಿ ವೈಷ್ಣವ್, ಪ್ರಹ್ಲಾದ್ ಪಟೇಲ್, ನಿವೃತ್ತ ಚುನಾವಣಾ ಆಯೋಗದ ಆಯುಕ್ತ ಅಶೋಕ್ ಲಾವಾಸಾ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಪತ್ರಕರ್ತರ ಫೋನ್ಗಳ ಮೇಲೆ ಪೆಗಾಸಸ್ ಕಣ್ಗಾವಲು ಸಾಫ್ಟ್ವೇರ್ ಬಳಸಿ, ಗೂಢಚಾರ ನಡೆಸುವ ಉದ್ದೇಶವಿತ್ತು. ಈ ಕುರಿತು ದತ್ತಾಂಶ ಸೋರಿಕೆಯಾಗಿದ್ದು, ಅದರಲ್ಲಿ 300 ಭಾರತೀಯರ ಫೋನ್ ನಂಬರ್ಗಳು ಇವೆ. 2018-2019ರ ಅವಧಿಯಲ್ಲಿ ಇದು ನಡೆದಿರುವ ಸಾಧ್ಯತೆ ಇದೆ ಎಂದು ವರದಿ ಮಾಡಿದೆ.
300 ಜನರನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಆದ್ರೆ ಎಲ್ಲರ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸಾಫ್ಟ್ವೇರ್ ಅಳವಡಿಸಿರಲಿಲ್ಲ. ಈ ಪಟ್ಟಿಯಲ್ಲಿರುವ 20ಕ್ಕೂ ಹೆಚ್ಚು ಜನರ ಸ್ಮಾರ್ಟ್‌ಫೋನ್‌ಗಳನ್ನು ಸ್ವತಂತ್ರ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದೆ. 10 ಸ್ಮಾರ್ಟ್‌ಫೋನ್‌ಗಳಲ್ಲಿ ಪೆಗಾಸಸ್ ತಂತ್ರಾಂಶ ಇರುವುದು ದೃಢಪಟ್ಟಿದೆ. ಇನ್ನು ಉಳಿದ ಸ್ಮಾರ್ಟ್‌ಫೋನ್‌ಗಳ ಮೇಲೆ ಕಣ್ಗಾವಲು ನಡೆಸಿರುವುದು ಕಂಡುಬಂದಿದೆ. 300 ಜನರ ಸ್ಮಾರ್ಟ್‌ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದರೆ, ಕಣ್ಗಾವಲು ತಂತ್ರಾಂಶ ಅಳವಡಿಕೆಯಾಗಿದೆಯಾ, ಇಲ್ಲವೇ ಗೊತ್ತಾಗುತ್ತದೆ ಎಂದು ವೈರ್ ವರದಿ ಹೇಳಿದೆ.
ಪೆಗಾಸಸ್ ವಿವಾದವು ರಾಜ್ಯ ಸಭೆ ಮತ್ತು ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿದ್ದು, ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ ಸಮರ ಆರಂಭವಾಗಿದೆ. ಅಂತೆಯೇ ಎರಡು ಸದನಗಳಲ್ಲಿ ಕಲಾಪ ಮುಂದೂಡುವ ಪ್ರಸಂಗ ನಡೆಯಿತು.
ಇನ್ನು ಗೃಹ ಸಚಿವ ಅಮಿತ್ ಶಾ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತನಿಖೆ ಕೈಗೊಳ್ಳುವಂತೆ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಆಗ್ರಹಿಸುತ್ತಿವೆ. ಆದ್ರೆ ಈ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.
ಏನಿದು ವಿವಾದ?:
ಇಸ್ರೇಲ್‌ನ ಸೈಬರ್ ಭದ್ರತಾ ಸಂಸ್ಥೆ NSO ಗ್ರೂಪ್ ಪೆಗಾಸಸ್ ಎಂಬ ಕಣ್ಗಾವಲು ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಅದನ್ನು ವಿದೇಶಿ ಸರ್ಕಾರಗಳಿಗೆ ಮತ್ತು ಸರ್ಕಾರದ ಗುಪ್ತಚರ ಸಂಸ್ಥೆಗಳಿಗೆ ಗೂಢಚಾರ ಮಾಡಲು ಮಾರಾಟ ಮಾಡುತ್ತದೆ. ವಿಶ್ವದಾದ್ಯಂತ ಸರ್ಕಾರಗಳಿಗೆ 50 ಸಾವಿರ ಜನರ ಮೇಲೆ ಕಣ್ಗಾವಲು ಇಡಲು ಈ ತಂತ್ರಾಂಶ ಸಹಾಯಕವಾಗಿದೆ. ಹಾಗೆಯೇ ಭಾರತ 300 ಪ್ರಭಾವಿಗಳ ಮೇಲೂ ಗೂಢಚಾರ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ನ್ಯಾಯಮೂರ್ತಿಗಳು ಇದ್ದಾರೆ ಎಂದು ತಿಳಿದುಬಂದಿದೆ. ಇದು ಸದ್ಯ ಭಾರಿ ವಿವಾದಕ್ಕೆ ಕಾರಣವಾಗಿದೆ.
ಯಾರು ಟಾರ್ಗೆಟ್?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಬಂಧಿ ಮತ್ತು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹೆಸರು ಈ ಪಟ್ಟಿಯಲ್ಲಿದೆ. ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ ಹೆಸರೂ ಈ ಪಟ್ಟಿಯಲ್ಲಿದೆ ಎಂದು ವರದಿಯಾಗಿದೆ.
ದೇಶದ ಪ್ರಮುಖ ಮಾಧ್ಯಮಗಳ ಒಟ್ಟು 40 ಪತ್ರಕರ್ತರ ಫೋನ್ ಸಂಖ್ಯೆಗಳು, ನಿವೃತ್ತ ಚುನಾವಣಾ ಆಯುಕ್ತರಾದ ಅಶೋಕ್ ಲಾವಾಸಾ ಹೆಸರೂ ಪಟ್ಟಿಯಲ್ಲಿದೆ. 2019ರ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ದೂರಿನ ಪರಿಶೀಲನೆ ನಡೆಸಿದ್ದ ಮೂವರು ಚುನಾವಣಾ ಆಯುಕ್ತರ ಸಮಿತಿಯಲ್ಲಿ ಅಶೋಕ್ ಕೂಡ ಇದ್ದರು. ಆಗ ಇಲ್ಲಿ ನಿಯಮ ಉಲ್ಲಂಘನೆಯಾಗಿಲ್ಲ ಎಂಬ ಇಬ್ಬರು ತೀರ್ಪು ನೀಡಿದ್ದರೆ. ಆದ್ರೆ ಅಶೋಕ್ ಅವರು, ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ತೀರ್ಪು ನೀಡಿದ್ದು ಸುದ್ದಿಯಾಗಿತ್ತು.
ಕೇಂದ್ರ ಸರ್ಕಾರದ ಹಾಲಿ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಅವರ ಮೇಲೂ ಕಣ್ಗಾವಲು ನಡೆಸಿರುವ ಸಾಧ್ಯತೆ ಇದೆ. 2019ರಲ್ಲಿ ಸುಪ್ರೀಂ ಕೋರ್ಟ್‌ನ ಸಿಜೆಯಾಗಿದ್ದ ರಂಜನ್ ಗೊಗಯಿ ಮತ್ತು ಅವರ ಕಚೇರಿ ಸಿಬ್ಬಂದಿಯ ಫೋನ್ ನಂಬರ್ಗಳು ಈ ಪಟ್ಟಿಯಲ್ಲಿವೆ.