ನವದೆಹಲಿ: ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ಪೆಗಾಸಸ್ ಸ್ಪೈವೇರ್ ಗೂಢಚರ್ಯೆ ಸಂಬಂಧ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಸಂಸದ ಹಾಗೂ ಮಾಹಿತಿ ತಂತ್ರಜ್ಞಾನ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ತರೂರ್ ಒತ್ತಾಯಿಸಿದ್ದಾರೆ.
ನಮ್ಮಲ್ಲಿ ಎರಡು ಕಾರ್ಯಸೂಚಿಗಳಿವೆ: ನಾಗರಿಕರ ಡೇಟಾ ಗೌಪ್ಯತೆ ಮತ್ತು ಸೈಬರ್ ಸುರಕ್ಷತೆ. 'ಪೆಗಾಸಸ್ ಪ್ರಾಜೆಕ್ಟ್' ಈ ಕಾರ್ಯಸೂಚಿಗಳ ಅಡಿಯಲ್ಲಿ ಬರುತ್ತದೆ. ಸ್ಥಾಯಿ ಸಮಿತಿಗೆ ಸರ್ಕಾರಿ ಕಾರ್ಯದರ್ಶಿಗಳನ್ನು ಪ್ರಶ್ನಿಸುವ ಹಕ್ಕಿದೆ. ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆಗೆ ನಾವು ಒತ್ತಾಯಿಸುತ್ತೇವೆ ಎಂದು ಶಶಿ ತರೂರ್ ಹೇಳಿದ್ದಾರೆ.
ಇದನ್ನೂ ಓದಿ: ಪೆಗಾಸಸ್ ಗೂಢಚರ್ಯೆ: ತನಿಖೆಗೆ ವಿಶೇಷ ಸಮಿತಿ ರಚಿಸಿದ ಇಸ್ರೇಲ್
ಸಂಸತ್ತಿನ ಆವರಣದೊಳಗಿನ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪೆಗಾಸಸ್ ವಿವಾದದ ವಿರುದ್ಧ ಇಂದು ಕಾಂಗ್ರೆಸ್, ಡಿಎಂಕೆ ಮತ್ತು ಶಿವಸೇನೆ ಸಂಸದರು ಪ್ರತಿಭಟನೆ ನಡೆಸಿದರು. ಪ್ರತಿಭಟನಾನಿರತ ಸಂಸದರು ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಪೆಗಾಸಸ್ ಸ್ನೂಪ್ ಗೇಟ್ ಎಂಬ ಘೋಷಣೆಗಳನ್ನು ಕೂಗಿದರು. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪೆಗಾಸಸ್ ಸ್ಪೈವೇರ್ ಇಸ್ರೇಲ್‌ನ ವರ್ಗೀಕೃತ ಆಯುಧವಾಗಿದ್ದು, ದೇಶದ ಸಂಸ್ಥೆಗಳ ವಿರುದ್ಧ ಇದನ್ನು ಬಳಸಿದೆ ಎಂದು ಆರೋಪಿಸಿದ್ದಾರೆ.