ಭೋಪಾಲ್ (ಮಧ್ಯ ಪ್ರದೇಶ) : ಪೆಗಾಸಸ್ ಸಾಫ್ಟವೇರ್ ಅವರ ಫೋನಿನಲ್ಲಿ ಇಲ್ಲ, ಬದಲಾಗಿ ಅವರ ಮನಸ್ಸಿನಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಫೋನನ್ನು ಇಸ್ರೇಲ್ನ ಪೆಗಾಸಸ್ ಸ್ಪೈವೇರ್ ಮೂಲಕ ಹ್ಯಾಕ್ ಮಾಡಲಾಗಿದೆ ಎಂಬ ರಾಹುಲ್ ಅವರ ಹೇಳಿಕೆ ಹಿನ್ನೆಲೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಇಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಚೌಹಾಣ್, ಪೆಗಾಸಸ್ ಫೋನ್‌ನಲ್ಲಿಲ್ಲ, ರಾಹುಲ್ ಗಾಂಧಿ ಅವರ ಮನಸ್ಸಿನಲ್ಲಿದೆ. ಪೆಗಾಸಸ್ ಕಾಂಗ್ರೆಸ್‌ನ ಡಿಎನ್‌ಎಗೆ ಪ್ರವೇಶಿಸಿದೆ. ರಾಹುಲ್ ಗಾಂಧಿಯವರ ಬುದ್ಧಿವಂತಿಕೆಯ ಬಗ್ಗೆ ನನಗೆ ಕರುಣೆಯಿದೆ. ಅವರು ವಿದೇಶಕ್ಕೆ ಹೋಗುತ್ತಾರೆ ಮತ್ತು ಅಲ್ಲಿ ನಮ್ಮ ದೇಶದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ. ಅವರು ವಿದೇಶಿ ರಾಯಭಾರ ಕಚೇರಿಗಳಿಗೆ ಹೋಗಿ ಭಾರತದ ವಿರೋಧಿಯಾಗಿ ಮಾತನಾಡುತ್ತಾರೆ. ವಿದೇಶಗಳಲ್ಲಿ ಭಾರತದ ಮಾನಹಾನಿ ಮಾಡುವುದು ಕಾಂಗ್ರೆಸ್‌ನ ಹೊಸ ಅಜೆಂಡಾ ಆಗಿದೆ ಎಂದರು.
ದೇಶ ವಿದೇಶಗಳಲ್ಲಿ ಟೀಕೆ ಮಾಡುವುದು ದೇಶ ವಿರೋಧಿ ಕೃತ್ಯ. ಹಾಗಾಗಿ ದೇಶ ಮತ್ತು ಜನತೆ ರಾಹುಲ್ ಗಾಂಧಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು. ಇತ್ತೀಚೆಗಷ್ಟೇ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡಿದ ರಾಹುಲ್ ಗಾಂಧಿ, ಇಸ್ರೇಲಿ ಸ್ಪೈವೇರ್ ಆಗಿರುವ ಪೆಗಾಸಸ್ ಮೂಲಕ ತಮ್ಮ ಫೋನ್ ಮೇಲೆ ಕಣ್ಣಿಡಲಾಗಿದೆ ಮತ್ತು ತಾವು ಕರೆಗಳಲ್ಲಿ ಮಾತನಾಡುವಾಗ ಹುಷಾರಾಗಿರುವಂತೆ ತಮಗೆ ಗುಪ್ತಚರ ಅಧಿಕಾರಿಗಳು ಎಚ್ಚರಿಸಿದ್ದಾರೆ ಎಂದು ಹೇಳಿದ್ದಾರೆ.
ನನ್ನ ಫೋನ್‌ನಲ್ಲಿ ಪೆಗಾಸಸ್ ಇತ್ತು. ಹಲವಾರು ರಾಜಕಾರಣಿಗಳ ಫೋನ್‌ಗಳಲ್ಲಿ ಪೆಗಾಸಸ್ ಇತ್ತು. ನೀವು ಫೋನ್‌ನಲ್ಲಿ ಏನೇ ಮಾತನಾಡಿದರೂ ನಿಮ್ಮ ಮಾತುಗಳ ಬಗ್ಗೆ ಹುಷಾರಾಗಿರಿ, ನಾವು ಕರೆಗಳನ್ನು ರೆಕಾರ್ಡ್ ಮಾಡುತ್ತಿರುತ್ತೇವೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ನನಗೆ ಕರೆ ಮಾಡಿ ತಿಳಿಸಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಪ್ರತಿಪಕ್ಷಗಳ ಮೇಲಿನ ಕ್ರಿಮಿನಲ್ ಕೇಸ್ಗಳ ಬಗ್ಗೆ ಮಾತನಾಡುವುದಾದರೆ, ನನ್ನ ವಿರುದ್ಧ ಹಲವಾರು ಕ್ರಿಮಿನಲ್ ಕೇಸ್ಗಳಿವೆ. ಯಾವುದೇ ಸಂದರ್ಭದಲ್ಲೂ ಕ್ರಿಮಿನಲ್ ಪ್ರಕರಣ ಆಗದಂಥ ಕೇಸ್ಗಳನ್ನು ನನ್ನ ಮೇಲೆ ಹಾಕಲಾಗಿದೆ. ಹೀಗಾಗಿಯೇ ನಮ್ಮನ್ನು ನಾವು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಲಾಡ್ಲಿ ಬೆಹನಾ ಯೋಜನೆಯನ್ನು ಟೀಕಿಸಿದ ಮಾಜಿ ಸಿಎಂ ಕಮಲ್ ನಾಥ್ ಅವರನ್ನು ಮುಖ್ಯಮಂತ್ರಿ ಚೌಹಾಣ್ ತರಾಟೆಗೆ ತೆಗೆದುಕೊಂಡರು. ನಾನು ಇಂದು ಅತ್ಯಂತ ಗಂಭೀರವಾಗಿ ಕೇಳುತ್ತಿದ್ದೇನೆ ಮತ್ತು ನಾಥ್ ಉತ್ತರಿಸಬೇಕಾಗಿದೆ. ನಾನು ಈ ಮುಂಚೆಯೂ ಪ್ರಶ್ನೆ ಮಾಡಿದ್ದೆ, ಆದರೆ ಉತ್ತರ ಸಿಕ್ಕಿಲ್ಲ. 2017 ರಲ್ಲಿ ನಾವು ಬೈಗಾ, ಭರಿಯಾ ಮತ್ತು ಸಹರಿಯಾ ಬುಡಕಟ್ಟು ಜನಾಂಗದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 1,000 ರೂ. ಜಮೆ ಮಾಡುವುದನ್ನು ಆರಂಭಿಸಿದೆವು. ಅವರು ತಮ್ಮ ಮಕ್ಕಳು ಹಾಗೂ ಕುಟುಂಬವನ್ನು ಚೆನ್ನಾಗಿ ಸಾಕಲು ಅನುಕೂಲವಾಗಲೆಂದು ಈ ಮೊತ್ತ ನೀಡುತ್ತಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಬೈಗಾ, ಭರಿಯಾ, ಸಹರಿಯಾ ಸಹೋದರಿಯರ ಖಾತೆಗೆ 1000 ರೂಪಾಯಿ ಜಮಾ ಮಾಡುವುದನ್ನು ನೀವು ಏಕೆ ನಿಲ್ಲಿಸಿದಿರಿ? ಇಂದು ಈ ಮಹಿಳೆಯರು ನಿಮಗೆ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಅಬ್ ಕಿ ಬಾರ್ ದೋ ಸೌ ಪಾರ್: ಮಧ್ಯ ಪ್ರದೇಶ ಬಿಜೆಪಿ ಚುನಾವಣಾ ಸ್ಲೋಗನ್!