ಬೆಂಗಳೂರು : ಕಕ್ಷೆಯಲ್ಲಿ ಸುತ್ತುತ್ತಿರುವ ನಿಷ್ಕ್ರಿಯಗೊಂಡಿರುವ ಉಪಗ್ರಹವೊಂದನ್ನು ಮರಳಿ ಭೂಮಿಗೆ ತರುವ ಕಾರ್ಯಾಚರಣೆಗೆ ಇಸ್ರೋ ಸಿದ್ಧತೆ ಮಾಡಿಕೊಂಡಿದೆ. ಕಡಿಮೆ ಭೂ ಕಕ್ಷೆಯಲ್ಲಿ ಸುತ್ತುತ್ತಿರುವ ಮೇಘಾ ಟ್ರಾಪಿಕಸ್-1 (MT-1) ಇದನ್ನು ಭೂಮಿಗೆ ಮರಳಿಸಲಾಗುತ್ತಿದೆ. ಈ ಉಪಗ್ರಹವನ್ನು ಅಕ್ಟೋಬರ್ 12, 2011 ರಂದು ಇಸ್ರೋ ಹಾಗೂ ಫ್ರೆಂಚ್ ಬಾಹ್ಯಾಕಾಶ ಸಂಸ್ಥೆಗಳ ಜಂಟಿ ಯೋಜನೆಯಡಿ ಉಡಾವಣೆ ಮಾಡಲಾಗಿತ್ತು. ಇದು ಉಷ್ಣವಲಯದ ಹವಾಮಾನ ಮತ್ತು ಪರಿಸರ ಅಧ್ಯಯನಕ್ಕಾಗಿ ಹಾರಿಬಿಟ್ಟ ಉಪಗ್ರಹವಾಗಿದೆ.
ಪೆಸಿಫಿಕ್ ಮಹಾಸಾಗರದಲ್ಲಿ 5° S ನಿಂದ 14° S ಅಕ್ಷಾಂಶ ಮತ್ತು 119° W ನಿಂದ 100° W ರೇಖಾಂಶದ ನಡುವಿನ ಜನವಸತಿಯಿಲ್ಲದ ಪ್ರದೇಶವನ್ನು MT1 ಗಾಗಿ ಉದ್ದೇಶಿತ ಮರು ಪ್ರವೇಶ ವಲಯ ಎಂದು ಗುರುತಿಸಲಾಗಿದೆ. ಭೂಮಿಗೆ ಬರಲಿರುವ ಉಪಗ್ರಹ ಸುಮಾರು 1000 ಕೆಜಿ ತೂಕ ಹೊಂದಿದೆ. ಈಗಲೂ ಉಪಗ್ರಹದಲ್ಲಿ ಸುಮಾರು 125 ಕೆಜಿ ಇಂಧನ ಬಳಕೆಯಾಗದೆ ಉಳಿದಿದೆ, ಇದು ಆಕಸ್ಮಿಕವಾಗಿ ವಿಘಟನೆಯ ಅಪಾಯವನ್ನುಂಟುಮಾಡುತ್ತದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪೆಸಿಫಿಕ್ ಮಹಾಸಾಗರದಲ್ಲಿ ಜನವಸತಿ ಇಲ್ಲದ ಸ್ಥಳದಲ್ಲಿ ಉಪಗ್ರಹವನ್ನು ಇಳಿಸಲು ಈ ಉಳಿದ ಇಂಧನವು ಸಾಕಾಗುತ್ತದೆ ಎಂದು ಅಂದಾಜಿಸಲಾಗಿದೆ. ನಿಯಂತ್ರಿತ ಮರು ಪ್ರವೇಶ ಕಾರ್ಯಾಚರಣೆಯಲ್ಲಿ ನಿರ್ದಿಷ್ಟ ಸುರಕ್ಷಿತ ಪ್ರದೇಶದಲ್ಲಿಯೇ ಉಪಗ್ರಹ ಇಳಿಯುವುದನ್ನು ಖಾತ್ರಿಪಡಿಸುವ ಸಲುವಾಗಿ ಉಪಗ್ರಹವು ಅತ್ಯಂತ ಕಡಿಮೆ ಎತ್ತರದ ಕಕ್ಷೆಯಲ್ಲಿ ಸುತ್ತುತ್ತಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಅಪಾಯ ಆಗದಂತೆ ಮುನ್ನೆಚ್ಚರಿಕೆ: ಸಾಮಾನ್ಯವಾಗಿ ಮರು ಪ್ರವೇಶದ ನಂತರ ವಾಯು ಉಷ್ಣ ವಿಘಟನೆಯಿಂದ ಕೆಲವೊಮ್ಮೆ ಯಾವುದೇ ಪರಿಣಾಮವಾಗದ ಸಾಧ್ಯತೆ ಇರುವುದರಿಂದ ದೊಡ್ಡ ಉಪಗ್ರಹಗಳು ಮತ್ತು ರಾಕೆಟ್ ಬಿಡಿಭಾಗಗಳಿಂದ ಭೂಮಿಯ ಮೇಲಿದ್ದವರಿಗೆ ಯಾವುದೇ ಅಪಾಯ ಸಂಭವಿಸದಂತೆ ಭಾರಿ ನಷ್ಟವನ್ನ ಮಿತಿಗೊಳಿಸಲು ನಿಯಂತ್ರಿತ ಮರು ಪ್ರವೇಶಕ್ಕೆ ಒಳಗಾಗುವಂತೆ ಮಾಡಲಾಗುತ್ತದೆ.
ಸಾಮಾನ್ಯವಾಗಿ ಇಂಥ ಎಲ್ಲ ಉಪಗ್ರಹಗಳು ತಮ್ಮ ಜೀವಿತಾವಧಿ ಮುಗಿದ ನಂತರ ನಿಯಂತ್ರಿತ ಮರು ಪ್ರವೇಶಕ್ಕೆ ಒಳಗಾಗುವಂತೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ MT1 ಅನ್ನು ಜೀವಿತಾವಧಿ ಮುಗಿದ ನಂತರದ ಕಾರ್ಯಾಚರಣೆಗಳಿಗಾಗಿ ನಿಯಂತ್ರಿತ ಮರು ಪ್ರವೇಶದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿಲ್ಲ, ಹೀಗಾಗಿ ಈ ಸಂಪೂರ್ಣ ಕಾರ್ಯಾಚರಣೆ ಸವಾಲಿನದ್ದಾಗಿದೆ ಎಂದು ಇಸ್ರೊ ಹೇಳಿದೆ. ಅಲ್ಲದೇ ಉಪಗ್ರಹವು ಸಾಕಷ್ಟು ಹಳೆಯದಾಗಿರುವುದರಿಂದ ಅದರ ಹಲವಾರು ವ್ಯವಸ್ಥೆಗಳು ಈಗ ಕೆಲಸ ಮಾಡುತ್ತಿಲ್ಲ ಮತ್ತು ಅದರ ಕಾರ್ಯಕ್ಷಮತೆ ಕಡಿಮೆಯಾಗಿದೆ.
ಇಸ್ರೊ ಕೇಂದ್ರಗಳಾದ್ಯಂತ ಮಿಷನ್, ಕಾರ್ಯಾಚರಣೆಗಳು, ಫ್ಲೈಟ್ ಡೈನಾಮಿಕ್ಸ್, ಏರೋಡೈನಾಮಿಕ್ಸ್, ಪ್ರೊಪಲ್ಷನ್, ನಿಯಂತ್ರಣಗಳು, ನ್ಯಾವಿಗೇಷನ್, ಥರ್ಮಲ್ ಮತ್ತು ಇತರ ಉಪ-ವ್ಯವಸ್ಥೆಯ ವಿನ್ಯಾಸ ತಂಡಗಳ ನಡುವಿನ ಅಧ್ಯಯನ, ಚರ್ಚೆಗಳು ಮತ್ತು ವಿನಿಮಯದ ಆಧಾರದ ಮೇಲೆ ಕಾರ್ಯಾಚರಣೆ ತಂಡವು ನವೀನ ಪರಿಹಾರೋಪಾಯಗಳನ್ನು ನಿಯೋಜಿಸಿದೆ. ಮಾರ್ಚ್ 7 ರಂದು 16:30 IST ನಿಂದ 19:30 IST ವರೆಗೆ ಉಪಗ್ರಹವನ್ನು ಭೂಮಿಗೆ ತರುವ ಅಂತಿಮ ಎರಡು ಡಿ ಬೂಸ್ಟ್ ಬರ್ನ್‌ಗಳು ನಡೆಯಲಿವೆ ಎಂದು ಇಸ್ರೊ ತಿಳಿಸಿದೆ.
ಏರೋ ಥರ್ಮಲ್ ಸಿಮ್ಯುಲೇಶನ್‌ಗಳ ಪ್ರಕಾರ ಉಪಗ್ರಹದ ಯಾವುದೇ ದೊಡ್ಡ ತುಣುಕುಗಳು ಮರು ಪ್ರವೇಶದ ಸಮಯದಲ್ಲಿ ಏರೋಥರ್ಮಲ್ ತಾಪಮಾನದ ಕಾರಣದಿಂದ ಉಳಿಯುವ ಸಾಧ್ಯತೆಯಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಇಸ್ರೊ ಬೇಹುಗಾರಿಕೆ ಕೇಸ್: ಕೇರಳ ಹೈಕೋರ್ಟ್ ಜಾಮೀನು ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್