ನವದೆಹಲಿ: ವರ್ಷದ ಕೊನೆಯ ಮತ್ತು ಮಹತ್ವದ ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಡಿಸೆಂಬರ್ 29 ರವರೆಗೆ ಒಟ್ಟು 17 ದಿನಗಳ ಕಾಲ ನಡೆಯಲಿದೆ. 16 ವಿವಿಧ ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ಧವಾಗಿದ್ದರೆ, ಹಲವು ವಿಷಯಗಳನ್ನಿಟ್ಟುಕೊಂಡು ಸರ್ಕಾರಕ್ಕೆ ಚಳಿ ಬಿಡಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
17 ದಿನಗಳ ಕಾಲ ನಡೆಯುವ ಸಂಸತ್ ಅಧಿವೇಶನ ಫಲಪ್ರದವಾಗಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಕಲ ಸಿದ್ಧತೆ ನಡೆಸಿದೆ. 95 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಭವ್ಯ ಸಂಸತ್ನಲ್ಲಿ ಇದೇ ಕೊನೆಯ ಅಧಿವೇಶನ ಎಂದೇ ಹೇಳಲಾಗುತ್ತಿದೆ. ಮುಂದಿನ ಅಧಿವೇಶನಗಳು ನೂತನವಾಗಿ ನಿರ್ಮಿಸಲಾಗಿರುವ ಸಂಸತ್ನಲ್ಲಿ ನಡೆಯಲಿವೆ.
ಯಾವೆಲ್ಲಾ ಮಸೂದೆಗಳು ಮಂಡನೆಗೆ ಸಜ್ಜು: ಬಹುರಾಜ್ಯ ಸಹಕಾರ ಸೊಸೈಟಿ(ತಿದ್ದುಪಡಿ) ಕಾಯ್ದೆ, ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ, ಜೈವಿಕ ವೈವಿಧ್ಯತೆ ತಿದ್ದುಪಡಿ ಮಸೂದೆ, ರಾಷ್ಟ್ರೀಯ ದಂತವೈದ್ಯ ಆಯೋಗ ಮಸೂದೆ, ರಾಷ್ಟ್ರೀಯ ನರ್ಸಿಂಗ್ ಆಯೋಗ ಮಸೂದೆಗಳು ಸೇರಿದಂತೆ 16 ವಿವಿಧ ಮಸೂದೆಗಳನ್ನು ಉಭಯ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ಸರ್ಕಾರ ಸಜ್ಜಾಗಿದೆ.
ಇತ್ತ ಸರ್ಕಾರದ ವಿರುದ್ಧ ಹಲವಾರು ವಿಷಯಗಳನ್ನಿಟ್ಟುಕೊಂಡು ಮುಗಿಬೀಳಲು ತಂತ್ರ ರೂಪಿಸಿವೆ. ಬೆಲೆ ಏರಿಕೆ, ನಿರುದ್ಯೋಗ, ಚೀನಾ ಗಡಿ ವಿವಾದ, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲು, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಸರ್ಕಾರದ ಯತ್ನ, ಆರ್ಥಿಕತೆ ಕುಸಿತದ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ.
ಹಳೆಯ ಸಂಸತ್ನಲ್ಲಿ ಇದೇ ಕೊನೆಯ ಕಲಾಪ?: ಬ್ರಿಟಿಷರ ಕಾಲದಲ್ಲಿ ಅಂದರೆ 1927 ರಲ್ಲಿ ನಿರ್ಮಿಸಲಾಗಿರುವ 95 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಸಂಸತ್ ಭವನದಲ್ಲಿ ನಡೆಯಲಿರುವ ಈ ಅಧಿವೇಶನ ಕೊನೆಯ ಅಧಿವೇಶನವಾಗಲಿದೆ ಎಂದೇ ಹೇಳಲಾಗ್ತಿದೆ.
ಇದರ ಪಕ್ಕದಲ್ಲೇ ನಿರ್ಮಾಣವಾಗಿರುವ ನೂತನ ಸಂಸತ್ ಆದ ಸೆಂಟ್ರಲ್ ವಿಸ್ತಾದಲ್ಲಿ ಮುಂದಿನ ಅಧಿವೇಶನಗಳು ನಡೆಸುವ ಸಾಧ್ಯತೆ ಇದೆ. ಮುಂದಿನ ವರ್ಷದ ಬಜೆಟ್ ಅಧಿವೇಶನವನ್ನೂ ಅಲ್ಲೇ ನಡೆಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಈ ಚಳಿಗಾಲದ ಅಧಿವೇಶನ ವಿದಾಯದ ಅಧಿವೇಶನವಾಗುವ ಸಾಧ್ಯತೆ ಇದೆ.