ನವದೆಹಲಿ: ಕೋವಿಡ್-19 ಎರಡನೇ ಅಲೆಯ ಭೀತಿಯ ಬೆನ್ನಲ್ಲೇ, ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯ ಜನರು ವ್ಯಾಕ್ಸಿನೇಷನ್ ಹಾಕಿಸಿಕೊಂಡಿಲ್ಲ ಎಂದು ಗೃಹ ವ್ಯವಹಾರಗಳ ಸಂಸದೀಯ ಸಮಿತಿ ಸೋಮವಾರ ಕಳವಳ ವ್ಯಕ್ತಪಡಿಸಿದೆ.
ರಾಜ್ಯಸಭೆಯಲ್ಲಿ ಮಂಡಿಸಲಾದ ಅನುದಾನದ ಬೇಡಿಕೆಯ ಕುರಿತು ಸಮಿತಿಯು ತನ್ನ 231 ಪುಟಗಳ ವರದಿಯಲ್ಲಿ, ಇದುವರೆಗೂ ಭಾರತೀಯ ಜನಸಂಖ್ಯೆಯ ಶೇಕಡಾ 1 ಕ್ಕಿಂತಲೂ ಕಡಿಮೆ ಜನರಿಗೆ ಲಸಿಕೆ ನೀಡಲಾಗಿದೆ. ಈ ದರದಲ್ಲಿ, ಇಡೀ ಜನಸಂಖ್ಯೆಗೆ ಲಸಿಕೆ ಹಾಕಲು ಹಲವು ವರ್ಷಗಳನ್ನೇ ತೆಗೆದುಕೊಳ್ಳಬಹುದು ಎಂದು ತಿಳಿಸಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 24 ಗಂಟೆಯೊಳಗೆ 15,051 ಕೋವಿಡ್ ಪಾಸಿಟಿವ್ : 48 ಮಂದಿ ಸಾವು
ಕೊರೊನಾ ವೈರಸ್ ರೂಪಾಂತರಗೊಳ್ಳುತ್ತಿರುವುದರಿಂದ ಮತ್ತು ಕೋವಿಡ್ -19 ರ ಹೊಸ ರೂಪಾಂತರಗಳು ವಿಶ್ವದ ವಿವಿಧ ಭಾಗಗಳಲ್ಲಿ ವರದಿಯಾಗುತ್ತಿರುವುದರಿಂದ ಇದು ತುಂಬಾ ಗಂಭೀರ ವಿಷಯವಾಗಿದೆ ಎಂದು ಸಮಿತಿ ಹೇಳಿದೆ.
ಸಿಎಪಿಎಫ್‌ಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಎಲ್ಲ ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ವಾರಿಯರ್ಸ್ ಲಸಿಕೆಯನ್ನು ಪಡೆಯಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಮಹಾರಾಷ್ಟ್ರ, ಪಂಜಾಬ್, ಗುಜರಾತ್ ಮತ್ತು ಇತರ ರಾಜ್ಯಗಳು ಸೇರಿದಂತೆ ಕೆಲವು ರಾಜ್ಯಗಳು ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿವೆ.
ಇದನ್ನೂ ಓದಿ: ಕೋವಿಡ್ 2ನೇ ಅಲೆ ಭೀತಿ: ಅಧಿವೇಶನದಲ್ಲಿ ಜನನಾಯಕರ ಡೋಂಟ್ ಕೇರ್, ಮಾಸ್ಕ್, ಸಾಮಾಜಿಕ ಅಂತರ ಮಾಯ!
ವೈದ್ಯಕೀಯ ಸೌಲಭ್ಯಗಳು ಸೀಮಿತವಾಗಿರುವುದರಿಂದ, ಲಕ್ಷದ್ವೀಪದಲ್ಲಿ ಲಸಿಕೆ ನೀಡಲು ಆದ್ಯತೆ ನೀಡಬೇಕಾಗಿದೆ ಎಂದು ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ನೇತೃತ್ವದ ಸಂಸದೀಯ ಸಮಿತಿ ಹೇಳಿದೆ.
ಈಟಿವಿ ಭಾರತಕ್ಕೆ ಲಭ್ಯವಿರುವ ಆರೋಗ್ಯ ಸಚಿವಾಲಯದ ಅಂಕಿ- ಅಂಶಗಳ ಪ್ರಕಾರ ಸೋಮವಾರ ಬೆಳಗ್ಗೆ ವರೆಗೆ ಒಟ್ಟು 2,99,08,038 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.