ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳೊಂದಿಗೆ 'ಪರೀಕ್ಷಾ ಪೇ ಚರ್ಚಾ' ಕುರಿತು ಸಂವಾದ ನಡೆಸಿದ್ದು, ವಿಶೇಷವಾಗಿ ಈ ಬಾರಿ ಚರ್ಚೆಯಲ್ಲಿ ಭಾಗವಹಿಸಲು ಪಾಲಕರು, ಶಿಕ್ಷಕರಿಗೂ ಅವಕಾಶ ನೀಡಲಾಗಿದೆ. ಈ ಸಂವಾದದಲ್ಲಿ ಆಯ್ಕೆಯಾದ ದೇಶದ ಮೂವತ್ತು ವಿದ್ಯಾರ್ಥಿಗಳಲ್ಲಿ ರಾಜ್ಯದ ಇಬ್ಬರು ಆಯ್ಕೆಯಾಗಿದ್ದು, ಇವರೊಂದಿಗೂ ಮಾತನಾಡಿದ್ದಾರೆ.
ಈ ಬಾರಿ ಕೊರೊನಾ ಸಾಂಕ್ರಾಮಿಕ ರೋಗದ ಕಾರಣ ಸಂವಾದ ವರ್ಚ್ಯುಯಲ್ ಆಗಿ ನಡೆದಿದೆ. ಇದರಲ್ಲಿ 14 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮೋದಿ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಈ ವರ್ಚ್ಯುಯಲ್ ಸಂವಾದದಲ್ಲಿ ಯಾರೆಲ್ಲ ಗೆಲ್ಲುತ್ತಾರೋ, ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರೊಟ್ಟಿಗೆ ನೇರವಾಗಿ ಮುಖಾಮುಖಿಯಾಗಿ ಸಂವಾದ ನಡೆಸುವ ಅವಕಾಶ ಇರಲಿದೆ.
ನರೇಂದ್ರ ಮೋದಿಯವರು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರೊಂದಿಗೆ ಪರೀಕ್ಷಾ ಪೆ ಚರ್ಚಾ ಸಂವಾದ ನಡೆಸುವುದನ್ನು ಎಲ್ಲರೂ ವೀಕ್ಷಿಸಬಹುದಾಗಿದೆ. ದೂರದರ್ಶನ ಸೇರಿ, ಸ್ವಯಂಪ್ರಭಾ ಗ್ರೂಫ್ನ 32 ಚಾನೆಲ್ಗಳು ಈ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ಬಿತ್ತರಿಸುತ್ತಿವೆ.
ಪರೀಕ್ಷಾ ಪೆ ಚರ್ಚಾಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮಾತ್ರ ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಕೇಳಿದ್ದಾರೆ. ಈ ಹಂತದಲ್ಲಿ ಗೆದ್ದವರು ವಿಶೇಷವಾಗಿ ವಿನ್ಯಾಸ ಮಾಡಲಾದ ಪ್ರಮಾಣಪತ್ರ, ಪರೀಕ್ಷಾ ಪೆ ಚರ್ಚಾ ಕಿಟ್ಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಟೋಗ್ರಾಫ್ ಇರುವ ಡಿಜಿಟಲ್ ಸ್ಮರಣಾರ್ಥಗಳನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.