ಕೋಜಿಕೋಡ್/ಕೇರಳ: ರಾಜ್ಯದಲ್ಲಿ ತನಿಖೆಯಾಗುತ್ತಿರುವ ಅಕ್ರಮ ಟೆಲಿಫೋನ್ ಎಕ್ಸ್ಚೇಂಜ್ ದಂಧೆ ಚಿನ್ನ ಕಳ್ಳಸಾಗಣೆ ದಂಧೆಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇರಳ ಅಪರಾಧ ವಿಭಾಗ ಪತ್ತೆ ಮಾಡಿದೆ. ಕಳ್ಳಸಾಗಣೆ ಗ್ಯಾಂಗ್‌ಗಾಗಿ ಸಾವಿರಕ್ಕೂ ಹೆಚ್ಚು ದೂರವಾಣಿ ಎಕ್ಸ್‌ಚೇಂಜ್‌ಗಳನ್ನು ಬಳಸಲಾಗಿದೆ ಎಂದು ತನಿಖಾ ಸಂಸ್ಥೆ ಕಂಡು ಹಿಡಿದಿದೆ.
ಅಕ್ರಮ ಟೆಲಿಫೋನ್ ವಿನಿಮಯ ಪ್ರಕರಣದ ಪ್ರಮುಖ ಆರೋಪಿ ಮಲಪ್ಪುರಂನ ಇಬ್ರಾಹಿಂನನ್ನು ವಿಚಾರಣೆಗೆ ಒಳಪಡಿಸಿದ ನಂತರ ಈ ಮಾಹಿತಿ ಹೊರಬಿದ್ದಿದೆ. ಅಕ್ರಮ ಟೆಲಿಫೋನ್ ಎಕ್ಸ್ಚೇಂಜ್ ಹಿಂದಿರುವ ಆರೋಪಿಗಳು ದೇಶಾದ್ಯಂತ ವ್ಯಾಪಕ ಸಂಪರ್ಕಗಳನ್ನು ಹೊಂದಿದ್ದಾರೆ ಎಂದು ತನಿಖಾ ತಂಡ ವಿವರಿಸಿದೆ. ಈ ವಿನಿಮಯ ದಂಧೆಗಾಗಿ ಸಿಮ್ ಬಾಕ್ಸ್‌ಗಳನ್ನು ಹಾಂಕಾಂಗ್‌ನಿಂದ ತರಿಸಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.114 ಸಿಮ್ ಬಾಕ್ಸ್‌ಗಳು ಕಳೆದ ಫೆಬ್ರವರಿಯಲ್ಲಿ ಹಾಂಕಾಂಗ್‌ನಿಂದ ದೆಹಲಿಗೆ ರವಾನೆಯಾಗಿದ್ದು, ನಂತರ ಅವುಗಳನ್ನು ದೇಶದ ಪ್ರಮುಖ ನಗರಗಳಿಗೆ ಸಾಗಿಸಲಾಗಿದೆ.
ಚಿನ್ನದ ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ವಿಶೇಷ ತಂಡವು, ಕೊಯ್ಲಾಂಡಿಯಲ್ಲಿ ಚಿನ್ನದ ಕಳ್ಳಸಾಗಣೆದಾರನನ್ನು ಅಪಹರಿಸಲು ಈ ಅಕ್ರಮ ಟೆಲಿಫೋನ್ ಎಕ್ಸ್ಚೇಂಜ್ ವ್ಯವಸ್ಥೆಯನ್ನು ಬಳಸಿರುವುದನ್ನು ಪತ್ತೆ ಮಾಡಿತ್ತು. ನಂತರ ಪೊಲೀಸರು ಈ ಮಾಹಿತಿಯನ್ನು ಕೋಯಿಕ್ಕೋಡ್ ಅಪರಾಧ ವಿಭಾಗಕ್ಕೆ ರವಾನಿಸಿದರು. ಕೋಜಿಕೋಡ್ ನಗರದ ಏಳು ಸ್ಥಳಗಳಲ್ಲಿ ಅಕ್ರಮ ಟೆಲಿಫೋನ್ ಎಕ್ಸ್ಚೇಂಜ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ.