ಹೈದರಾಬಾದ್: ಪ್ರೀತಿಸಿ ಮದುವೆಯಾದ ಪತ್ನಿಗಾಗಿ ಪಾಕಿಸ್ತಾನದ ವ್ಯಕ್ತಿಯೊಬ್ಬ ದೇಶದ ಗಡಿ ದಾಟಿದ ಘಟನೆ ವರದಿಯಾಗಿದೆ. ಆತ ಪಾಕಿಸ್ತಾನದಿಂದ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಬಳಿಕ ಹೈದರಾಬಾದ್ ತಲುಪಿದ್ದ. ಒಂಬತ್ತು ತಿಂಗಳ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಈತ ತನ್ನ ಪತ್ನಿಯ ಸಹೋದರನ ಸೋಗಿನಲ್ಲಿ ಆಧಾರ್ ಕಾರ್ಡ್ ಮಾಡಿಸಲು ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಪಶ್ಚಿಮ ವಲಯ ಡಿಸಿಪಿ ಸಾಯಿ ಚೈತನ್ಯ ಗುರುವಾರ ರಾತ್ರಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ಮೂಲಗಳ ಪ್ರಕಾರ 'ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಮೂಲದ ಫಯಾಜ್ ಅಹಮದ್ (24) 2018ರ ಡಿಸೆಂಬರ್‌ನಲ್ಲಿ ಉದ್ಯೋಗಕ್ಕಾಗಿ ಶಾರ್ಜಾಕ್ಕೆ ತೆರಳಿದ್ದ. ಸೈಫ್‌ಝೋನ್‌ನಲ್ಲಿ ಆತ ಜವಳಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ. 2019ರಲ್ಲಿ ಹೈದರಾಬಾದ್‌ನ ಬಹದ್ದೂರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಶನ್‌ಬಾಗ್‌ನ ನೇಹಾ ಫಾತಿಮಾ (29) ಉದ್ಯೋಗಕ್ಕಾಗಿ ಶಾರ್ಜಾಕ್ಕೆ ಹೋಗಿದ್ದರು. ಫಯಾಜ್ ಆಕೆಗೆ ಅಲ್ಲಿನ ಮಿಲೇನಿಯಮ್ ಫ್ಯಾಶನ್ ಇಂಡಸ್ಟ್ರಿಯಲ್ಲಿ ಕೆಲಸ ಕೊಡಿಸಲು ಸಹಾಯ ಮಾಡಿದ್ದ. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ 2019ರಲ್ಲಿ ಶಾರ್ಜಾದಲ್ಲಿ ವಿವಾಹವಾಗಿದ್ದರು. ಇವರಿಗೆ ಒಬ್ಬ ಗಂಡು ಮಗುವಿದೆ.
ಫಾತಿಮಾ ಒಬ್ಬಳೇ ಕಳೆದ ವರ್ಷ ಹೈದರಾಬಾದ್‌ಗೆ ಬಂದು ಕಿಶನ್‌ಬಾಗ್‌ನ ಅಸಫ್ ಬಾಬಾನಗರದಲ್ಲಿ ನೆಲೆಸಿದ್ದರು. ಫಯಾಜ್ ಪಾಕಿಸ್ತಾನಕ್ಕೆ ಹೋಗಿದ್ದ. ಬಳಿಕ ಫಯಾಜ್ ಫಾತಿಮಾ ಪೋಷಕರಾದ ಜುಬೇರ್ ಶೇಖ್ ಮತ್ತು ಅಫ್ಜಲ್ ಬೇಗಂ ಅವರನ್ನು ಸಂಪರ್ಕಿಸಿದ್ದ. ಅವರು ಹೈದರಾಬಾದ್‌ಗೆ ಬರಲು ಗುರುತಿನ ದಾಖಲೆ ಕೊಡಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಫಯಾಜ್ ನವೆಂಬರ್ 2022ರಲ್ಲಿ 30 ದಿನಗಳ ವಿಸಿಟಿಂಗ್ ವೀಸಾದಲ್ಲಿ ಪಾಕಿಸ್ತಾನದಿಂದ ನೇಪಾಳಕ್ಕೆ ಬಂದಿದ್ದ. ಫಾತಿಮಾ ಪೋಷಕರು ನೇಪಾಳದ ಕಠ್ಮಂಡುವಿಗೆ ಹೋಗಿ ಫಯಾಜ್‌ನನ್ನು ಭೇಟಿಯಾಗಿದ್ದರು. ಬಳಿಕ ಅಲ್ಲಿನ ಕೆಲವರ ಸಹಾಯದಿಂದ ಗಡಿ ದಾಟಿ ಭಾರತಕ್ಕೆ ಕರೆತಂದಿದ್ದರು. ನಂತರ ಕಿಶನ್‌ಬಾಗ್‌ನಲ್ಲಿ ಅಕ್ರಮವಾಗಿ ನೆಲೆಸುವಂತೆ ವ್ಯವಸ್ಥೆ ಮಾಡಿದ್ದರು.
ಅಲ್ಲದೇ ಆತನಿಗೆ ಆಧಾರ್ ಕಾರ್ಡ್ ನೀಡಿ ಸ್ಥಳೀಯ ವ್ಯಕ್ತಿ ಎಂದು ನಂಬಿಸಲು ಪ್ಲಾನ್ ಮಾಡಿದ್ದರು. ನಕಲಿ ಜನನ ಪ್ರಮಾಣ ಪತ್ರದ ಮೂಲಕ ಆತನನ್ನು ಮಾದಾಪುರದ ಆಧಾರ್ ಕೇಂದ್ರಕ್ಕೆ ಕರೆದೊಯ್ದು ತಮ್ಮ ಮಗ ಮೊಹಮ್ಮದ್ ಗೌಸ್ ಎಂಬ ಹೆಸರಿಗೆ ನೋಂದಾಯಿಸಲು ಪ್ರಯತ್ನಿಸಿದರು. ಆದರೆ, ಜುಬೇರ್ ಮತ್ತು ಅಫ್ಜಲ್‌ಗೆ ಮೊಹಮ್ಮದ್ ಗೌಸ್ ಎಂಬ ಮಗನಿಲ್ಲ ಎಂದು ತಿಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಫಯಾಜ್‌ನನ್ನು ಬಂಧಿಸಿದ್ದಾರೆ.
ಫಾತಿಮಾ ಪೋಷಕರಾದ ಜುಬೇರ್ ಮತ್ತು ಅಫ್ಜಲ್ ಬೇಗಂ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಕೇಂದ್ರ ಗುಪ್ತಚರ ಸಂಸ್ಥೆಗಳು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿವೆ. ಉದ್ದೇಶ ಪೂರ್ವಕವಾಗಿಯೇ ಆತ ಗಡಿ ದಾಟಿ ಬಂದಿದ್ದನಾ?, ಅಥವಾ ಷಡ್ಯಂತ್ರವೇನಾದರೂ ಇದೆಯೇ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮತ್ತೊಂದು ಗಡಿಯಾಚೆಗಿನ ಪ್ರೇಮ ಪ್ರಕರಣ: ಒಂದು ವರ್ಷದ ಮಗನೊಂದಿಗೆ ಪತಿ ಅರಸಿ ನೋಯ್ಡಾಕ್ಕೆ ಬಂದ ಬಾಂಗ್ಲಾ ಮಹಿಳೆ