ಹೈದರಾಬಾದ್: ಕರ್ನಾಟಕ ಸೇರಿದಂತೆ ದೇಶದಲ್ಲಿ ಹಿಜಾಬ್ ಬಗ್ಗೆ ಸಂಘರ್ಷ ಉಂಟಾದ ಸುದ್ದಿಯನ್ನು ಪಾಕಿಸ್ತಾನ ಟೀಕಿಸಿ, ಇದು ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ. ಇದನ್ನು ಭಾರತ ಸರ್ಕಾರ ತಡೆಯಬೇಕು ಎಂದು ಉಪದೇಶ ನೀಡಿದೆ. ಇದೀಗ ಅದೇ ದೇಶದಲ್ಲಿ ಆಡಳಿತಾರೂಢ ಪಕ್ಷದ ಸಂಸದರೊಬ್ಬರು ಮಗಳ ವಯಸ್ಸಿನ ಯುವತಿಯೊಂದಿಗೆ ವಿವಾಹವಾಗಿ ಸುದ್ದಿಯಾಗಿದ್ದಾರೆ.
ಆ ಮಹಾನ್ ಸಂಸದನ ಹೆಸರು ಅಮೀರ್ ಲಿಯಾಖತ್ ಹುಸೈನ್. ವಯಸ್ಸು ಕೇವಲ 49. ಪಾಕಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತೆಹ್ರಿಕ್ ಇ ಇನ್ಸಾಫ್(ಪಿಟಿಐ) ಪಕ್ಷದ ಸಂಸದ. ಅಲ್ಲದೇ ಅಮೀರ್ ಪ್ರಸಿದ್ಧ ಟಿವಿ ವಾಹಿನಿಯೊಂದರ ನಿರೂಪಕನೂ ಆಗಿದ್ದಾನೆ. ಸಂಸದ ಅಮೀರ್ ಲಿಯಾಖತ್ ಹುಸೈನ್ 18 ವರ್ಷದ ಸಯೀದಾ ದಾನಿಯಾ ಶಾ ಎಂಬ ಯುವತಿ ಜೊತೆ ನಿಕಾ(ವಿವಾಹ) ಮುಗಿಸಿದ್ದಾನೆ. ಅದೂ ಸಂಸದರ 3 ನೇ ಮದುವೆ ಎಂಬುದು ವಿಶೇಷ.
ಅಮೀರ್ ಲಿಯಾಖತ್ ಹುಸೈನ್ ಮತ್ತು ಸಯೀದಾ ದಾನಿಯಾ ಶಾ ಬುಧವಾರದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಅಮೀರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇಬ್ಬರ ಮದುವೆ ಫೋಟೋ ಹಂಚಿಕೊಂಡು ವಿವಾಹದ ಸುದ್ದಿ ಬಹಿರಂಗಪಡಿಸಿದ್ದಾರೆ. ಇದು ಈಗ ಪಾಕಿಸ್ತಾನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಗಳ ವಯಸ್ಸಿನ ಯುವತಿ ಜೊತೆ ಮದುವೆಯಾದ ಸಂಸದನ ವಿರುದ್ಧ ಭಾರೀ ಟೀಕೆ ಮತ್ತು ಮೀಮ್ಸ್ಗಳು ಹರಿದಾಡುತ್ತಿವೆ.
18 ವರ್ಷದ ಹುಡುಗಿ ಜೊತೆ ಮೂರನೇ ಮದುವೆ: ಅಮೀರ್ ಲಿಯಾಖತ್ ಹುಸೈನ್ ತಮ್ಮ ಎರಡನೇ ಪತ್ನಿಯಿಂದ 15 ತಿಂಗಳ ಹಿಂದೆಯೇ ದೂರವಾಗಿದ್ದಾನೆ. ಇಬ್ಬರೂ ಬೇರ್ಪಡುವ ನಿರ್ಧಾರ ಮಾಡಿದ್ದರು. ಎರಡು ದಿನಗಳ ಹಿಂದಷ್ಟೇ ಅಂದರೆ ಬುಧವಾರದಂದು ಸಂಸದ ಅಮೀರ್ ತಮ್ಮ ಎರಡನೇ ಹೆಂಡತಿಗೆ ವಿಚ್ಚೇದನ ನೀಡಿದ್ದಾರೆ. ಅಂದು ರಾತ್ರಿಯೇ 18 ವರ್ಷದ ಸಯೀದಾಳ ಜೊತೆ ಸಪ್ತಪದಿ ತುಳಿದಿದ್ದಾರೆ.
ಅಭಿನಂದಿಸಿದ ಪ್ರಧಾನಿ ಇಮ್ರಾನ್ ಖಾನ್: 18 ವರ್ಷದ ಯುವತಿ ಜೊತೆ ಮೂರನೇ ವಿವಾಹವಾದ ತಮ್ಮ ಪಕ್ಷದ ಸಂಸದನಿಗೆ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅಭಿನಂದನೆ ಸಲ್ಲಿಸಿದ್ದಾರೆ. ಇದಕ್ಕೆ ಲಿಯಾಖತ್ ಧನ್ಯವಾದ ಸಲ್ಲಿಸಿದ್ದಾರೆ.
ಮದುವೆ ವಿರುದ್ಧ ಟೀಕೆ, ಮೀಮ್ಸ್: 49 ವರ್ಷದ ಸಂಸದ 18 ವರ್ಷದ ಯುವತಿ ಜೊತೆ ಮದುವೆಯಾದ ಸುದ್ದಿ ತಿಳಿದ ಬಳಿಕ ನೆಟಿಜೆನ್ಸ್ ಟೀಕೆ, ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ನೀವು ಶ್ರೀಮಂತ ಮತ್ತು ಅಧಿಕಾರ ಹೊಂದಿದ್ದರೆ ಮುದುಕರಾಗಿದ್ದರೂ ಮಗಳ ವಯಸ್ಸಿನ ಹುಡುಗಿಯನ್ನು ಮದುವೆಯಾಗಬಹುದು ಎಂದು ವ್ಯಂಗ್ಯವಾಡಿದರೆ, ಹುಡುಗಿಯರು ಶಿಕ್ಷಣ ಮತ್ತು ಆರ್ಥಿಕ ಸಶಕ್ತತೆಗೆ ಈ ದಾರಿ ಹಿಡಿಯುತ್ತಾರೆ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.
ಓದಿ: ಹಿಜಾಬ್ ತೀರ್ಪು ನಮ್ಮ ವಿರುದ್ದವಾಗಿ ಬಂದರೆ ಕಾನೂನಾತ್ಮಕ ಹೋರಾಟ : ಸಿಎಫ್ಐ ರಾಜ್ಯಾಧ್ಯಕ್ಷ