ಅಮೃತಸರ (ಪಂಜಾಬ್): ಭಾರತದ ಗಡಿಯಲ್ಲಿ ಪಾಕಿಸ್ತಾನಿ ಡ್ರಗ್ ಸ್ಮಗ್ಲರ್ಗಳಿಂದ ಗಡಿಯಾಚೆಗಿನ ಮಾದಕ ದ್ರವ್ಯ ಕಳ್ಳಸಾಗಣೆ ಮುಂದುವರೆದಿದೆ. ಆದರೆ ಗಡಿಯಲ್ಲಿ ನಿಯೋಜಿಸಲಾಗಿರುವ ಬಿಎಸ್‌ಎಫ್ ಸಿಬ್ಬಂದಿ ಈ ಅಕ್ರಮ ಸಾಗಣೆಗಳನ್ನು ವಿಫಲಗೊಳಿಸುತ್ತಿದ್ದಾರೆ. ಹೌದು, ಮತ್ತೊಮ್ಮೆ, ಅಮೃತಸರದ ಅಟ್ಟಾರಿ ಗಡಿ ಬಳಿಯ ಪುಲ್ ಮೌರಾನ್ ಬಿಒಪಿ ಬಳಿ ಬಿಎಸ್ಎಫ್ ಸಿಬ್ಬಂದಿ ಡ್ರೋನ್ ಅನ್ನು ಗುಂಡು ಹೊಡೆದು ನೆಲಕ್ಕುರುಳಿಸಿದ್ದಾರೆ.
ಬಿಎಸ್‌ಎಫ್ ಬೆಟಾಲಿಯನ್ 22 ರ ಯೋಧರು ಶನಿವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ರಾತ್ರಿ 9 ಗಂಟೆಗೆ ಪಾಕಿಸ್ತಾನದ ಕಡೆಯಿಂದ ಡ್ರೋನ್ನ ಚಲನವಲನ ಗಮನಕ್ಕೆ ಬಂದಿದೆ. ಗಸ್ತು ತಿರುಗುವಾಗ ಡ್ರೋನ್ನ ಶಬ್ದ ಕೇಳಿದ ತಕ್ಷಣವೇ ಬಿಎಸ್‌ಎಫ್ ಯೋಧರು ಗುಂಡಿನ ದಾಳಿ ಆರಂಭಿಸಿದರು. ಸ್ವಲ್ಪ ಹೊತ್ತಿನ ನಂತರ ಡ್ರೋನ್ನ ಸದ್ದು ನಿಂತಿದೆ. ಡ್ರೋನ್ ಭಾರತದ ಗಡಿ ಪ್ರವೇಶಿಸಿದ ಸದ್ದು ಬಿಎಸ್ ಎಫ್ ಸಿಬ್ಬಂದಿಗೆ ಕೇಳಿಸಿದ್ದು, ಗುಂಡಿನ ದಾಳಿ ನಂತರ ಡ್ರೋನ್ ವಾಪಸ್ ಬಂದ ಶಬ್ದ ಕೇಳಿಸಲಿಲ್ಲ.
ಇದಾದ ಬಳಿಕ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಸುಮಾರು ಒಂದು ಗಂಟೆಯ ಪ್ರಯತ್ನದ ನಂತರ, ಡ್ರೋನ್ ದೊರಕಿದ್ದು ಅದನ್ನು ಪುಲ್-ಮೌರ್ ಪ್ರದೇಶದಿಂದ ವಶಪಡಿಸಿಕೊಳ್ಳಲಾಯಿತು. ಡ್ರೋನ್‌ಗೆ ದೊಡ್ಡ ಹಳದಿ ಪ್ಯಾಕೆಟ್ನ್ನು ಜೋಡಿಸಲಾಗಿತ್ತು. ಆದರೆ ಅದನ್ನು ಭದ್ರತಾ ಕಾರಣಗಳಿಂದ ಸದ್ಯಕ್ಕೆ ತೆರೆಯಲಾಗಿಲ್ಲ ಎಂದು ತಿಳಿದುಬಂದಿದೆ.
ಟ್ವೀಟ್ ಮಾಡಿದ ಬಿಎಸ್ಎಫ್ : ಬಿಎಸ್ಎಫ್ ಪಂಜಾಬ್ ಫ್ರಂಟಿಯರ್ ಅಧಿಕೃತ ಟ್ವೀಟ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ ಮತ್ತು ನಾಲ್ಕನೇ ಡ್ರೋನ್ನ್ನು ಬಿಎಸ್ಎಫ್ ಕೇವಲ ಎರಡು ದಿನಗಳಲ್ಲಿ ಹೊಡೆದುರುಳಿಸಿದೆ. ಇದರಿಂದ ಶಂಕಿತ ಮಾದಕ ವಸ್ತು ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ಪೋಸ್ಟ್ ಮಾಡಿದೆ.
ಜಮ್ಮು ಮತ್ತು ಕಾಶ್ಮೀರ ರಜೌರಿಯಲ್ಲಿ ಪತ್ತೆಯಾಗಿತ್ತು ಪಾಕ್ ಡ್ರೋನ್: ಕಳೆದ ಎಪ್ರಿಲ್ನಲ್ಲಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಜಿಲ್ಲೆಯ ಸುಂದರ್ಬನಿ ಸೆಕ್ಟರ್‌ನ ಬೆರಿ ಪಟ್ಟಾನ್ ಪ್ರದೇಶದಲ್ಲಿ ರಾತ್ರಿ ವೇಳೆ ಭಾರತದ ಭೂಪ್ರದೇಶಕ್ಕೆ ಡ್ರೋನ್ ಪ್ರವೇಶಿಸಿತ್ತು. ಇದನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ಹೊಡೆದುರುಳಿಸಿದ್ದವು. ಈ ಡ್ರೋನ್‌ಗೆ ಒಂದು ಪ್ಯಾಕೆಟ್ ಕೂಡ ಕಟ್ಟಲಾಗಿತ್ತು. ಇದರಲ್ಲಿ ಎಕೆ 47 ರೈಫಲ್‌ನ ಐದು ಮ್ಯಾಗಜೀನ್‌ಗಳು, 131 ರೌಂಡ್ಸ್, 2 ಲಕ್ಷ ರೂಪಾಯಿ ನಗದು ಮತ್ತು ಇತರ ವಸ್ತುಗಳು ಪತ್ತೆಯಾಗಿದ್ದವು.
ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು, ನಗದು ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆಯು ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯ ಎರಡೂ ಪ್ರದೇಶಗಳಲ್ಲಿ ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಇಂತಹ ವಸ್ತುಗಳನ್ನು ಪದೇ ಪದೆ ಭಾರತದ ಭೂಪ್ರದೇಶದಲ್ಲಿ ಬಿಡುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಪಾಕಿಸ್ತಾನದ ಕುತಂತ್ರ ಬುದ್ಧಿ ಬಗ್ಗೆ ವಿವರಿಸಿದ್ದಾರೆ.
ಇದನ್ನೂ ಓದಿ: 'ಹಾರಾಡುವ ಶವಪೆಟ್ಟಿಗೆ'! ತನಿಖೆ ಮುಗಿಯುವವರೆಗೆ ಮಿಗ್ 21 ಯುದ್ಧ ವಿಮಾನಗಳ ಹಾರಾಟವಿಲ್ಲ